ವೃಕ್ಷೋತ್ಥಾನ ಹೆರಿಟೇಜ್ ರನ್- 2024- ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಜನಜಾಗೃತಿ ಮೂಡಿಸಲು ಡಿಸಿ ಟಿ. ಭೂಬಾಲನ್ ಕರೆ

ವಿಜಯಪುರ, ಅ. 22: ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷೋತ್ಥಾನ ಹೆರಿಟೇಜ್ ರನ್-2024 ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ನಾನಾ ಕಾಲೇಜುಗಳ ಪ್ರಾಚಾರ್ಯರೊಂದಿಗೆ ಸಭೆ ನಡೆಸಿದರು.

ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ನಡೆದ ಕಾರ್ಯಕ್ರಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನರು ಪಾಲ್ಗೋಂಡಿದ್ದರು. ಈ ಬಾರಿ ಅದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಓಟಗಾರರು ಪಾಲ್ಗೋಳ್ಳಲು ಈಗಿನಿಂದಲೇ ನೋಂದಣಿ ಪ್ರಕ್ರಿಯೆಗೆ ವೇಗ ನೀಡಬೇಕು. ಅಲ್ಲದೇ, ಪ್ರತಿವಾರ ತಮಗೆ ಮತ್ತು ಜಿ. ಪಂ. ಸಿಇಓ ಅವರಿಗೆ ವರದಿ ಸಲ್ಲಿಸಬೇಕು. ಕಾಲೇಜುಗಳ ಪ್ರಾಚಾರ್ಯರು ಮತ್ತು ಅಧಿಕಾರಿಗಳು ಈ ಓಟದಲ್ಲಿ ಹೆಚ್ಚೆಚ್ಚು ಯುವಕರು ಮತ್ತು ಜನರು ಪಾಲ್ಗೋಳ್ಳಲು ಜನಜಾಗೃತಿ ಮೂಡಿಸುವುದರ ಮೂಲಕ ಪ್ರೋತ್ಸಾಹಿಸಬೇಕು. ಅಲ್ಲದೇ, ಪ್ರಾಯೋಜಕತ್ವಕ್ಕೂ ಆದ್ಯತೆ ನೀಡಬೇಕು. ಪ್ರವಾಸೋದ್ಯಮ ಇಲಾಖೆ ನಗರಾದ್ಯಂತ ಪ್ರವಾಸಿ ತಾಣಗಳ ಕುರಿತು ಮಾಹಿತಿ ನೀಡುವ ಫಲಗಳನ್ನು ಅಳವಡಿಸಬೇಕು. ಎಲ್ಲರೂ ಪರಸ್ಪರ ಸಹಕಾರದಿಂದ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಲು ಕೈಜೋಡಿಸಬೇಕು ಎಂದು ಸೂಚನೆ ನೀಡಿದರು.
ವೃಕ್ಷೋಥಾನ್ ಹೆರಿಟೇಜ್ ರನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಮತ್ತು ಅವರ ತಂಡದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಈಗಾಗಲೇ ಶ್ರಮವಹಿಸುತ್ತಿದ್ದಾರೆ. ಪರಿಸರ, ಪ್ರಾಚೀನ ಸ್ಮಾರಕ, ಆರೋಗ್ಯ ಮತ್ತು ಪ್ರವಾಸೋದ್ಯಕ್ಕೆ ಉತ್ತೇಜನ ನೀಡುವ ಈ ಮಹತ್ವದ ವೃಕ್ಷೋತ್ಥಾನ್ ಒಳ್ಳೆಯ ಉದ್ದೇಶದಿಂದ ಕೂಡಿದೆ. ಈಗಿನಿಂದಲೇ ಇತತರೂ ತೊಡಗಿಸಿಕೊಳ್ಳಬೇಕು. ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳೂ ಕೂಡ ರೈತರ ಜಮೀನಿನಲ್ಲಿ ಗಿಡ ನೆಡಲು ಜಾಗೃತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ವೃಕ್ಷೋತ್ಥಾನ್ ಹೆರಿಟೇಜ್ ರನ್ ಗೆ ಎಲ್ಲ ಇಲಾಖೆಗಳೂ ಸಂಪೂರ್ಣವಾಗಿ ಕೈಜೊಡಿಸಬೇಕು. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯೋನ್ಮುಖರಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದರು.

ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಸಚಿವ ಎಂ. ಬಿ. ಪಾಟೀಲ ಅವರ ಪ್ರಯತ್ನದ ಫಲವಾಗಿ ಮಮದಾಪುರ ಬಳಿ ಇರುವ ಮೀಸಲು ಅರಣ್ಯ ಪ್ರದೇಶಕ್ಕೆ ಶತಮಾನದ ಸಂತ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಹೆಸರನ್ನು ಸರಕಾರ ನಾಮಕರಣ ಮಾಡಿದೆ. ಜಿಲ್ಲಾಡಳಿತ ಕೂಡ ವೃಕ್ಷೋತ್ಥಾನ್ ಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಸರಕಾರ ಮತ್ತು ಜಿಲ್ಲಾಡಳಿತಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇವೆ ಎಂದು ಹೇಳಿದರು.

ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವೃಕ್ಷೋತ್ಥಾನ್ ಹೆರಿಟೇಜ್ ರನ್ ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಮಾತನಾಡಿದರು.

ಈ ಮುಂಚೆ ಅರಣ್ಯ ಮತ್ತು ತೋಟಗಾರಿಕೆ ಇಲಾಖೆಗಳ ಸಿಬ್ಬಂದಿ ಸಸಿಗಳನ್ನು ಮಾರಾಟ ಮಾಡಲು ಪರದಾಡುತ್ತಿದ್ದರು. ಆದರೆ, ವೃಕ್ಷೋತ್ಥಾನ್ ಆರಂಭಿಸಿದಾಗಿನಿಂದ ಸಾರ್ವಜನಿಕರಲ್ಲಿ ಪರಿಸರದ ಕಾಳಜಿಯ ಬಗ್ಗೆ ಜಾಗೃತಿ ಉಂಟಾಗಿದ್ದು, ಸಸಿಗಳನ್ನು ಪಡೆಯಲು ಜನರಲ್ಲಿ ನೂಕುನುಗ್ಗಲು ಉಂಟಾಗುತ್ತಿದೆ. ವಿಜಯಪುರ ವೃಕ್ಷೋಥಾನ್ ರಾಷ್ಡ್ರೀಯ ಮಟ್ಟದ ಮ್ಯಾರಾಥಾನ್ ಗಳಿಗೆ ಪೈಪೋಟಿ ನೀಡುತ್ತಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರನ್ನು ಆಕರ್ಷಿಸಿದರೆ ಅವರು ದುಶ್ಚಟಗಳಿಂದ ದೂರವಾಗಿ ಸದೃಢ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ. ಹೊರ ರಾಜ್ಯಗಳ ಓಟಗಾರರು ಇದರಲ್ಲಿ ಪಾಲ್ಗೋಳ್ಳುವುದರಿಂದ ವಿಜಯಪುರ ನಗರದ ಪ್ರಮುಖ ಐತಿಹಾಸಿಕ, ಧಾರ್ಮಿಕ ತಾಣಗಳಲ್ಲಿ ಓಡುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗಲಿದೆ ಎಂದು ಹೇಳಿದರು.

ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಮಾತನಾಡಿ, ಪೊಲೀಸ್ ಮತ್ತು ಐ.ಆರ್.ಬಿ ವತಿಯಿಂದ ಹೆಚ್ಚಿನ ಸಂಖ್ಯೆಯ ಸಿಬ್ಬಂದಿ ಈ ಓಟದಲ್ಲಿ ಪಾಲ್ಗೋಳ್ಳಲಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ, ಅರಣ್ಯ ಇಲಾಖೆಯ ಡಿಸಿಎಫ್ ಶಿವಶರಣಯ್ಯ ಕೆ., ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಹೆಚ್ಚಳಕ್ಕೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಾನಾ ಇಲಾಖೆಗಳ ಅಧಿಕಾರಿಗಳು, ವೃಕ್ಷೋತ್ಥಾನ್ ಹೆರಿಟೇಜ್ ರನ್ ಕೋರ್ ಕಮಿಟಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌