ಡೋಣಿ ನದಿ ಪ್ರವಾಹ ತಡೆಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಟಿ.ಭೂಬಾಲನ್-ಜಿ.ಪಂ.ಸಿಇಓ ರಿಷಿ ಆನಂದ ಡೋಣಿ ನದಿಗೆ ಭೇಟಿ- ಪರಿಶೀಲನೆ

ವಿಜಯಪುರ:  ಜಿಲ್ಲೆಯಲ್ಲಿ ಡೋಣಿ ನದಿಯಿಂದ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹಾಗೂ ಜಿಲ್ಲಾಧಿಕಾರಿ ರಿಷಿ ಆನಂದ ಅವರು ಬುಧವಾರ ಜಿಲ್ಲೆಯ ಡೋಣಿ ನದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಪ್ರವಾಹ ನಿಯಂತ್ರಣ ಯೋಜನೆ ರೂಪಿಸುವ ಕುರಿತು ಈಗಾಗಲೇ  ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಡೋಣಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆಗಳಲ್ಲಿ ಹೂಳು ತುಂಬಿಕೊಂಡು ಸೇತುವೆಯ ಎತ್ತರ ಕಡಿಮೆಯಾಗಿ ನೀರಿನ ಶೇಖರಣೆ ಸಾಧ್ಯವಾಗದೇ ಇರುವುದರಿಂದ ನದಿಯಲ್ಲಿ ಹರಿಯುವ ನೀರಿನ ಒತ್ತಡ ಹೆಚ್ಚಾಗಿ ನೀರು ತನ್ನ ಪಥ ಬದಲಿಸಿ ಸುತ್ತಮುತ್ತಲಿನ ಜಮೀನುಗಳಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಉಂಟಾಗಲಿರುವುದರಿಂದ ಡೋಣಿಗೆ ಸೇರುವ ಕಾಲುವೆಗಳ ಪರಿಶೀಲನೆ ಹಾಗೂ ಡೋಣಿ ವ್ಯಾಪ್ತಿಯ ನಾನಾ ಕಡೆ ಚೆಕ್ ಡ್ಯಾಂ ನಿರ್ಮಾಣಕ್ಕೆ ಇರುವ ಅವಕಾಶಗಳು ಮತ್ತು ಡೋಣಿ ನದಿಯಿಂದ ಬೇರೆ ಕಾಲುವೆ, ಕೆರೆ-ಕಟ್ಟೆಗಳಿಗೆ ನೀರನ್ನು ಹರಿಸುವುದು ಸೇರಿದಂತೆ ಪ್ರವಾಹ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ನಾನಾ ಅಧಿಕಾರಿಗಳೊಂದಿಗೆ ಜಿಲ್ಲೆಯ ಹರನಾಳ, ದಾಶ್ಯಾಳ ಸಾರವಾಡ, ಎನ್.ಎಚ್.218 ಹೊನಗನಹಳ್ಳಿ, ಉಕುಮನಾಳ, ಹಿಟ್ನಳ್ಳಿ ಡೋಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಜ್‍ಗಳ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಜಯಪುರ ಜಿಲ್ಲೆಯ ಡೋಣಿ ನದಿ ತೀರದ ಗ್ರಾಮಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್, ಜಿ. ಪಂ. ಸಿಇಓ ರಿಷಿ ಆನಂದ ಮತ್ತೀತರ ಅಧಿಕಾರಗಳು ಭೇಟಿ ನೀಡಿದರು.
ಈ ಸಂದರ್ಭದಲ್ಲಿ  ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಕೃಷಿ ಜಂಟಿ ನಿರ್ದೇಶಕ ಎಲ್.ರೂಪಾ, ಗ್ರಾಮೀಣ ಕುಡಿಯುವ ನೀರು ಸರಬರಾಜು ಹಾಗೂ ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಬಸವರಾಜ ಕುಂಬಾರ, ಭೂಮಾಪನ ಇಲಾಖೆ ಉಪನಿರ್ದೇಶಕ ಮಹಾಂತೇಶ ಮುಳಗುಂದ, ಜಲಬಿರಾದರಿ ಸಂಸ್ಥೆಯ ಪೀಟರ್ ಅಲೆಕ್ಸಾಂಡರ್ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌