ಬುದ್ಧ ಎಂದರೆ ದೇವರಲ್ಲ, ಅರಿವಿನ, ಜ್ಞಾನದ ಬೆಳಕು- ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ

ವಿಜಯಪುರ: ಬುದ್ಧ ಎಂದರೆ ದೇವರಲ್ಲ, ಬುದ್ಧ ಎಂದರೆ ಅರಿವಿನ, ಜ್ಞಾನದ ಬೆಳಕು. ಮೂಢ ನಂಬಿಕೆಗಳಿAದ ಹೊರಬಂದು ಅರಿವಿನ ಭಾರತ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅವರು ಹೇಳಿದ್ದಾರೆ.

ಬುದ್ಧವಿಹಾರ ನಿರ್ಮಾಣ ಸಮಿತಿಯ ಆಶ್ರಯದಲ್ಲಿ ನಗರದ ಸಾರಿಪುತ್ರ-ಬೋಧಿಧಮ್ಮ ಬುದ್ಧವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ೬೮ನೆಯ ಧಮ್ಮಚಕ್ರ ಪರಿವರ್ತನ ದಿನಾಚರಣೆ ಹಾಗೂ ವರ್ಷಾವಾಸ ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 

2500 ವರ್ಷಗಳ ಹಿಂದೆ ಜೂಜಾಟ, ಸುರಾಪಾನ, ಪ್ರಾಣಿಬಲಿ ಮುಂತಾದ ಅನಿಷ್ಟಗಳ ಮೂಲಕ ಸಮಾಜವು ನೈತಿಕವಾಗಿ ಅಧಃಪತನಗೊಂಡಿದ್ದ ಮತ್ತು ದೇವರನ್ನು ಒಲಿಸಿಕೊಳ್ಳಲು ಮೌಢ್ಯವೆಂಬ ಅಂಧಃಕಾರದಲ್ಲಿ ಮುಳುಗಿದ್ದ ಸಮಯದಲ್ಲಿ ಬುದ್ಧನೆಂಬ ಹೊಸ ಬೆಳಕೊಂದು ಮೂಡಿಬಂತು. ಭಗವಾನ ಬುದ್ಧರು ದೇವರು, ಆತ್ಮ, ಪುನರ್ಜನ್ಮಗಳನ್ನು ನಿರಾಕರಿಸಿದರು. ಕರ್ಮಸಿದ್ಧಾಂತವನ್ನು ಒಪ್ಪಿಕೊಳ್ಳಲಿಲ್ಲ. ಬುದ್ಧನ ಧಮ್ಮದಲ್ಲಿ ದೇವರಿಗೆ ಸ್ಥಾನವಿಲ್ಲ, ನೈತಿಕತೆಗೆ ಸ್ಥಾನವಿದೆ ಎಂದು ಹೇಳಿದರು.

ಜಗತ್ತು ನೋವಿನಿಂದ ಕೂಡಿದೆ. ನೋವು ಸಂಕಟಗಳಿAದ ಪಾರಾಗುವ ಮಧ್ಯಮ ಮಾರ್ಗ ತೋರಿದವರು ಬುದ್ಧ. ಅಷ್ಟಾಂಗ ಮಾರ್ಗಗಳ ಮೂಲಕ ಒಬ್ಬ ಮನುಷ್ಯ ನೆಮ್ಮದಿಯ ಜೀವನ ನಡೆಸಬಹುದು. ಎಲ್ಲ ಕೆಡುಕುಗಳಿಗೆ ಮನಸ್ಸೇ ಕಾರಣ, ನಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ ಅವರು ಬುದ್ಧ ವಿಹಾರಗಳು ಕೇವಲ ಪೂಜೆ, ಪ್ರಾರ್ಥನೆಯ ತಾಣಗಳಾಗದೆ ಶೈಕ್ಷಣಿಕ ಕೇಂದ್ರಗಳಾಗಿ, ಸಮಾಜಕ್ಕೆ ಜ್ಞಾನವನ್ನು ಹಂಚಬೇಕು ಎಂದು ಅವರು ಹೇಳಿದರು.

 

ಯುದ್ಧ ಬೇಡವೆಂದು ಸಾಮ್ರಾಜ್ಯವನ್ನೇ ತೊರೆದವರು ಬುದ್ಧ. ಯುದ್ಧದಿಂದಾಗುವ ಸಾವು ನೋವುಗಳಿಂದ ನೊಂದ ಸಾಮ್ರಾಟ ಅಶೋಕ ಎಂದಿಗೂ ಯುದ್ಧ ಮಾಡುವುದಿಲ್ಲವೆಂದು ಶಸ್ತçತ್ಯಾಗ ಮಾಡಿದ. ಆತನ ಸಮಯದಲ್ಲಿ ೧೫ ದೇಶಗಳು ಭಾರತದಲಿದ್ದು, ಪ್ರಬುದ್ಧ ಭಾರತವಾಗಿತ್ತು. ಮಹಿಳೆಯರ ಹಕ್ಕುಗಳಿಗಾಗಿ ಮಂತ್ರಿಪದವಿಯನ್ನು ಧಿಕ್ಕರಿಸಿ ಬಂದವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಬೌದ್ಧ ಧಮ್ಮವನ್ನು ಸ್ವೀಕರಿಸುವ ಮೂಲಕ ಪ್ರಬುದ್ಧ ಭಾರತ ನಿರ್ಮಾಣದ ಕನಸು ಕಂಡಿದ್ದರು. ಬುದ್ಧ-ಅಂಬೇಡ್ಕರ್ ಕನಸಿನ ಪ್ರಬುದ್ಧ ಭಾರತವನ್ನು ನಿರ್ಮಿಸಬೇಕಿದೆ ಎಂದು ಅವರು ಹೇಳಿದರು.

ಸಾನಿಧ್ಯ ವಹಿಸಿದ್ದ ಭಂತೆ ಡಾ. ಶಾಕು ಬೋಧಿಧಮ್ಮ ಮಾತನಾಡಿ, ಶತಮಾನಗಳಿಂದ ಶೋಷಣೆಗೊಳಗಾಗಿರುವ ದಲಿತ ಮತ್ತು ಶೋಷಿತ ಸಮುದಾಯಗಳು ಭಾರತದ ನಿಜವಾದ ಚರಿತ್ರೆಯನ್ನು ಓದಬೇಕು. ಶೋಷಣೆಮುಕ್ತ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದ ನಮ್ಮ ಮಹಾಪುರುಷರ ಚರಿತ್ರೆಯನ್ನು ತಿಳಿದುಕೊಳ್ಳಬೇಕು. ಇತಿಹಾಸದ ಅರಿವಿಲ್ಲದ ಈ ಸಮುದಾಯಗಳು ಬುದ್ಧ, ಬಸವ, ಫುಲೆ, ಶಾಹು, ಅಂಬೇಡ್ಕರ್ ಕಂಡ ಸಮಸಮಾಜದ ಕನಸನ್ನು ಸಾಕಾರಗೊಳಿಸಬೇಕು. ಬುದ್ಧಭಾರತವನ್ನು ಕಟ್ಟಬೇಕು ಎಂದು ಅವರು ಹೇಳಿದರು.

ಜಾತಿ ಧರ್ಮಗಳ ಹೆಸರಿನಲ್ಲಿ ಮನುಷ್ಯ ಮನುಷ್ಯರ ನಡುವೆ ನಡೆಯುತ್ತಿರುವ ಸಂಘರ್ಷ ನಿಲ್ಲಬೇಕು. ಯುದ್ಧದ ಹೆಸರಿನಲ್ಲಿ ಮಾನವ ಕುಲವೇ ತಲ್ಲಣಿಸುತ್ತಿದೆ. ಇಡೀ ವಿಶ್ವವೇ ಇಂದು ಶಾಂತಿಯನ್ನು ಬಯಸುತ್ತಿದೆ. ಭಗವಾನ ಬುದ್ಧರ ಬೋಧನೆಗಳು ಮಾತ್ರ ಎಲ್ಲ ಸಂಕಟಗಳಿಗೆ ಪರಿಹಾರ ನೀಡಬಹುದಾಗಿದೆ. ಬುದ್ಧ ಮಾರ್ಗ ಮಾತ್ರ ಶಾಂತಿಯ ಮಾರ್ಗವಾಗಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಬುದ್ಧವಿಹಾರ ನಿರ್ಮಾಣ ಸಮಿತಿಯ ಅಧ್ಯಕ್ಷ ರಾಜಶೇಖರ ಯಡಹಳ್ಳಿ ಮಾತನಾಡಿ, ಬುದ್ಧವಿಹಾರದಲ್ಲಿ ಧಾರ್ಮಿಕ ಚಟುವಟಿಕೆಗಳು ಮಾತ್ರವಲ್ಲದೆ ಬಡಮಕ್ಕಳ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅವುಗಳನ್ನು ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲು ಯೋಜಿಸಲಾಗಿದೆ. ಬುದ್ಧವಿಹಾರವು ಯಾರದೂ ಸ್ವಂತ ಆಸ್ತಿಯಲ್ಲ. ಇದು ಸಮಾಜದ ಆಸ್ತಿಯಾಗಿದ್ದು, ವಿಹಾರದ ಎಲ್ಲ ಚಟುವಟಿಕೆಗಳಿಗೆ ಪ್ರತಿಯೊಬ್ಬರ ಸಹಕಾರವೂ ಅಗತ್ಯ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬುದ್ಧವಿಹಾರ ನಿರ್ಮಾಣ ಸಮಿತಿಯ ಉಪಾಧ್ಯಕ್ಷ ಶಶಿಕಾಂತ ಹೊನವಾಡಕರ, ಬುದ್ಧವಿಹಾರ ನಿರ್ಮಾಣಕ್ಕೆ ಶ್ರಮಿಸಿದ ಹಿರಿಯರ ಶ್ರಮವನ್ನು ಸ್ಮರಿಸಿದರಲ್ಲದೆ, ಮುಂದಿನ ಯೋಜನೆಗಳನ್ನು ವಿವರಿಸಿದರು.

ಇದೇ ಸಂದರ್ಭದಲ್ಲಿ ಬುದ್ಧವಿಹಾರ ನಿರ್ಮಾಣ ಮತ್ತು ಅಭಿವೃದ್ಧಿಗೆ ಶ್ರಮಿಸಿದ ಪೀರಪ್ಪ ನಡುವಿನಮನಿ ದಂಪತಿಗಳು, ಚಿದಾನಂದ ನಿಂಬಾಳ, ಅಯ್ಯಪ್ಪ ಸಿಂಧೂರ, ಕೃಷ್ಣಪ್ಪ ಬಡಳ್ಳಿ, ಮಲ್ಲಪ್ಪ ಸವನಳ್ಳಿ, ಜಿ.ಬಿ. ಹೆಗಡ್ಯಾಳ ಅವರ ಕುಟುಂಬಸ್ಥರಿಗೆ ಬುದ್ಧವಿಹಾರ ನಿರ್ಮಾಣ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಮೂರು ತಿಂಗಳುಗಳ ಕಾಲ ಬುದ್ಧವಿಹಾರದಲ್ಲಿದ್ದು ವರ್ಷಾವಾಸ ನಡೆಸಿಕೊಟ್ಟ ತೆಲಂಗಾಣದ ಭಂತೆ ಬೋಧಕೀರ್ತಿ ಅವರಿಗೆ ನಿರ್ಮಾಣ ಸಮಿತಿಯ ನಾಗರಾಜ ಲಂಬು, ರಾಜೇಶ ತೊರವಿ, ದಶವಂತ ಗುನ್ನಾಪುರ, ಆನಂದ ಔದಿ, ಮನೋಜ ಕೋಟ್ಯಾಳಕರ, ಅಪ್ಪು ನಾಗಠಾಣ ಚೀವರದಾನ ಮಾಡಿದರು.

ಅಡಿವೆಪ್ಪ ಸಾಲಗಲ್ಲ ಸ್ವಾಗತಿಸಿದರು.  ಸಾಬು ಚಲವಾದಿ ವಂದಿಸಿದರು. ಪ್ರತಾಪ ಚಿಕ್ಕಲಕಿ ನಿರೂಪಿಸಿದರು.

ಇದಕ್ಕೂ ಮುನ್ನ ಮನಗೂಳಿ ರಸ್ತೆಯ ಡಾ. ಅಂಬೇಡ್ಕರ್ ಭವನದಿಂದ ಬುದ್ಧವಿಹಾರದ ವರೆಗೆ ನಡೆದ ಭಗವಾನ ಬುದ್ಧ ಮತ್ತು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗಳ ಭವ್ಯ ರಥಯಾತ್ರೆಗೆ ಮಾಜಿ ಶಾಸಕರಾದ ಪ್ರೊ. ರಾಜು ಆಲಗೂರ, ಮಹಾನಗರ ಪಾಲಿಕೆ ಸದಸ್ಯರಾದ ಆರತಿ ಶಹಾಪುರ, ಪರಶುರಾಮ ಹೊಸಮನಿ ಅವರು ಚಾಲನೆ ನೀಡಿದರು. ಉಪಾಸಕಿಯರಿಂದ ಧಮ್ಮಧ್ವಜಾರೋಹಣ ನೆರವೇರಿತು.

ಭಂತೆ ಬೋಧಿ ಆನಂದ, ಭಂತೆ ಬೋಧಿಚಕ್ಷು, ಭಂತೆ ಬೋಧಿದರ್ಪಣ, ಪ್ರಭುಗೌಡ ಪಾಟೀಲ, ಆರ್.ಡಿ. ಸೂಳಿಕೇರಿ, ವಿ.ಎ. ಪಾಟೀಲ, ಸುಧಾಕರ ಕನಮಡಿ, ಭೀಮಶಿ ಹಿಪ್ಪರಗಿ, ಅನಿಲ ಹೊಸಮನಿ, ಎಂ.ಬಿ. ಹಳ್ಳದಮನಿ, ರಮೇಶ ಹಳ್ಳಿ, ಕೆ.ಎಂ. ಶಿವಶರಣ, ಬಿ.ಎಸ್. ಬ್ಯಾಳಿ, ಚಿದಾನಂದ ಹೊನವಾಡಕರ, ಸಿ.ಆರ್. ತೊರವಿ, ಎಸ್.ಎಲ್. ಇಂಗಳೇಶ್ವರ, ಮಡಿವಾಳ ಯಾಳವಾರ, ಸಂಜು ಕಂಬಾಗಿ, ಚೆನ್ನು ಕಟ್ಟಿಮನಿ, ಸೋಮು ರಣದೇವಿ, ಮತಿನಕುಮಾರ ದೇವಧರ, ಸಂತೋಷ ಕಾಂಬಳೆ, ಲೋಹಿತ ಪಾರಣ್ಣವರ, ಉಮೇಶ ಹೆಂಡೆಗಾರ, ಮಣಿಕಂಠ ಸಾಗರ, ಸುಭಾಸ ಜುಮನಾಳ, ನಾಗರಾಜ ಲಿಂಗದಳ್ಳಿ, ದಯಾನಂದ ಹಾಲ್ಯಾಳ, ಶ್ರೀಧರ ಹಾಲ್ಯಾಳ, ಗಣೇಶ ಘಟಕಾಂಬಳೆ, ಸುರೇಶ ಬಬಲೇಶ್ವರ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು, ನೂರಾರು ಉಪಾಸಕ-ಉಪಾಸಕಿಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌