ವಿಜಯಪುರ: ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಶನಿವಾರ ನಗರದ ಅಗ್ನಿಶಾಮಕ, ಅರಣ್ಯ ಇಲಾಖೆ, ನಿರಾಶ್ರಿತರ ಕೇಂದ್ರ, ಜಿಲ್ಲಾ ತರಬೇತಿ ಶಿಕ್ಷಣ ಸಂಸ್ಥೆ, ಕೇಂದ್ರೀಯ ವಿದ್ಯಾಲಯ, ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಸರಕಾರಿ ಬಾಲಕರ ಬಾಲಮಂದಿರ ಹಾಗೂ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ ಟಕ್ಕೆಯಲ್ಲಿರುವ ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ನಿರಾಶ್ರಿತರಿಗಾಗಿ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಒಳಾಂಗಣದಲ್ಲಿ ಬೆಳೆಸಿರುವ ಹಸರಿಕರಣ- ಪರಿಸರ ಪ್ರಜ್ಞೆಗೆ ಸಾಕ್ಷಿಯಾಗಿದೆ. ವೈದ್ಯಕೀಯ ಸೌಲಭ್ಯ, ಆಹಾರ ಗುಣಮಟ್ಟ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಲು ನೀರು ಪೂರೈಸುವ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಹಾಗೂ ಬಯಲು ರಂಗಮಂದಿರದಲ್ಲಿ ಇರಿಸಿರುವ ಸಾಮಗ್ರಿಗಳನ್ನು ಬೇರೆಡೆ ಸ್ಥಳಾಂತರಿಸಿ, ಈ ಸ್ಥಳದಲ್ಲಿ ನಿರಾಶ್ರಿತರಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಕುರಿತು ಕ್ರಮ ವಹಿಸುವಂತೆ ತಿಳಿಸಿದ ಅವರು, ನಿರಾಶ್ರಿತರ ಕೇಂದ್ರದ ಮುಂಭಾಗದಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚನೆ ನೀಡಿದರು.
ನಿರಾಶ್ರಿತರ ಕೇಂದ್ರದ ನಿರಾಶ್ರಿತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿಗಳು, ತಮ್ಮಲ್ಲಿರುವ ಕೌಶಲ್ಯಕ್ಕೆ ತಕ್ಕಂತೆ ಶ್ರಮವಹಿಸಿ ಕಾರ್ಯನಿರ್ವಹಿಸುವ ಮೂಲಕ ಬದುಕಿಗೆ ದಾರಿ ಕಂಡುಕೊಳ್ಳಬೇಕು. ಯಾವುದೇ ವ್ಯಸನಗಳಿಗೆ ದಾಸರಾಗದೇ ಸುಂದರ ಬದುಕು ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳುವ ಮೂಲಕ ನಿರಾಶ್ರಿತರಲ್ಲಿ ಆತ್ಮವಿಶ್ವಾಸ ತುಂಬಿದರು.
ಅರಣ್ಯ ಇಲಾಖೆಗೆ ಭೇಟಿ ನೀಡಿ, ಅರಣ್ಯಾಧಿಕಾರಿಗಳ ನಿರ್ಮಾಣ ಹಂತದಲ್ಲಿರುವ ವಸತಿ ಸಮುಚ್ಛಯಗಳನ್ನು ವೀಕ್ಷಿಸಿದ ಅವರು, ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವಂತೆ ಸೂಚಿಸಿದರು. ಅದೇ ಆವರಣದಲ್ಲಿ ನಿರ್ಮಾಣವಾಗುತ್ತಿರುವ ಅಲ್ಪಸಂಖ್ಯಾತ ಇಲಾಖೆಯ ಮೌಲಾನಾ ಆಝಾದ ಮಾದರಿ ಶಾಲೆ ಕಟ್ಟಡವನ್ನು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಕೇಂದ್ರೀಯ ವಿದ್ಯಾಲಯಕ್ಕೆ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳ ಕುರಿತು ಪರಿಶೀಲಿಸಿದ ಅವರು, ವಿದ್ಯಾಲಯದ ಆವರಣದಲ್ಲಿ ಹಸರೀಕರಣಕ್ಕಾಗಿ ಸಿಎಸ್‍ಆರ್ ಅನುದಾನದಡಿ ಅನುದಾನ ಒದಗಿಸಲು ಕ್ರಮ ವಹಿಸಲಾಗುವುದು. ಮಕ್ಕಳ ಕ್ರೀಡಾಂಗಣ, ಪೀಠೋಪಕರಣ-ಪಾಠೋಪಕರಣ ಬಗ್ಗೆ ಮಾಹಿತಿ ಪಡೆದುಕೊಂಡರು. ವಿದ್ಯಾಲಯದ ಆವರಣದ ಜಾಗೆಯಲ್ಲಿ ಹಸರೀಕರಣಕ್ಕೆ ಒತ್ತು ನೀಡಬೇಕು. ಕೇಂದ್ರೀಯ ವಿದ್ಯಾಲಯದಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳುವಂತೆ ತಿಳಿಸಿದ ಅವರು, ಶಾಲಾ ಕೊಠಡಿ, ಶಾಲಾ ಪರಿಸರ ವೀಕ್ಷಣೆ ಮಾಡಿದರು.
ದೇವರಾಜ್ ಅರಸು ಮೆಟ್ರಿಕ್ ನಂತರದ ಬಾಲಕ ವಸತಿ ನಿಲಯಕ್ಕೆ ಭೇಟಿ ನೀಡಿ, ಅಲ್ಲಿ ಕಲ್ಪಿಸಲಾಗುತ್ತಿರುವ ಮೂಲಭೂತ ಸೌಲಭ್ಯಗಳ ಕುರಿತು ಪರಿಶೀಲನೆ ನಡೆಸಿದರು. ಮಿಲಿಟರಿ ಬಾಲಕರ ವಸತಿ ನಿಲಯಕ್ಕೆ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆಗೆ ಅಗತ್ಯ ರೂಪರೇಷೆ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಬಾಲಕರ ಬಾಲಮಂದಿರಕ್ಕೆ ಭೇಟಿ ನೀಡಿ, ಬಾಲಮಂದಿರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಗುಣಮಟ್ಟದ ಆಹಾರ ಒದಗಿಸಲು ಕ್ರಮ ವಹಿಸಬೇಕು. ಮಕ್ಕಳಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಲು ಪ್ರೇರೆಪಿಸಬೇಕು ಎಂದು ಸೂಚಿಸಿದ ಅವರು, ನಂತರ ನಿರ್ಮಿತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಜಲಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಗೋವಿಂದ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ಎನ್.ಮಲಜಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಶಾಂತ ಪೂಜಾರಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಜಾನಕಿ, ಪಾಲಿಕೆಯ ಪರಿಸರ ಅಭಿಯಂತರ ಅಶೋಕ ಸಜ್ಜನ, ಕೆ.ವಿ.ಪ್ರಾಂಶುಪಾಲ ಜುಮನಾರಾಮ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಸೇರಿದಂತೆ ನಾನಾ ಅಧಿಕಾರಿಗಳು ಉಪಸ್ಥಿತರಿದ್ದರು.