ವಿಜಯಪುರ: ಬಸವನಾಡು ವಿಜಯಪುರದ ಡಾ. ಅಶ್ವಿನಿ ಆಸ್ಪತ್ರೆಯ ಮಕ್ಕಳ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ ಮತ್ತು ಬಸವನ ಬಾಗೇವಾಡಿಯ ಜಾನಪದ ಕಲಾವಿದ ಬಸವರಾಜ ಸಂಗಪ್ಪ ಹಾರಿವಾಳ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ನವೆಂಬರ್ 1 ರಂದು ಬೆಂಗಳೂರನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಸಚಿವರು ಈ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಸಂತಸ ವ್ಯಕ್ತಪಡಿಸಿದ ಖ್ಯಾತ ವೈದ್ಯ ಡಾ. ಎಲ್. ಎಚ್. ಬಿದರಿ
ತಮಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದಕ್ಕೆ ಡಾ. ಎಲ್. ಎಚ್. ಬಿದರಿ ಸಂತಸ ವ್ಯಕ್ತಪಡಿಸಿದ್ದಾರೆ. 71 ವರ್ಷದ ಡಾ. ಬಿದರಿ ಅವರು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸರಕಾರ ಮತ್ತು ಪ್ರಶಸ್ತಿ ದೊರೆಯಲು ಕಾರಣರಾಗಿರುವ ಎಲ್ಲ ಸಚಿವರಿಗೂ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ.
ನಾನು ಕಳೆದ 45 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಸರಕಾರ ಮತ್ತು ಸಚಿವರು ನನ್ನ ಸೇವೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಸೇವೆ ಸಲ್ಲಿಸಲು ಹೊಸ ಹುಮ್ಮಸ್ಸು ನೀಡಿದೆ ಎಂದು ತಿಳಿಸಿದ್ದಾರೆ.
ಡಾ. ಎಲ್. ಎಚ್. ಬಿದರಿ ಅವರ ಹಿನ್ನೆಲೆ
71 ವರ್ಷದ ಡಾ. ಎಲ್. ಎಚ್. ಬಿದರಿ ಕಳೆದ 45 ವರ್ಷಗಳಿಂದ ಆರೋಗ್ಯ ಮಾತ್ರವಲ್ಲ ಸಾಮಾಜಿಕ ಸೇವೆಯಲ್ಲಿಯೂ ಕ್ರಿಯಾಶೀಲರಾಗಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕ ಅಷ್ಟೆ ಅಲ್ಲ, ಇಡೀ ಭಾರತದಲ್ಲಿಯೇ ಟಾಯರ್- 3 ನಗರದಲ್ಲಿ 120 ಹಾಸಿಗೆಗಳ ಬಿ.ಎನ್.ಬಿ ಪೆಡಿಯಾಟ್ರಿಕ್ ಸ್ನಾತಕೋತ್ತರ ಕೇಂದ್ರವನ್ನು ಸ್ಥಾಪಿಸಿದ ಮೊದಲಿಗರಾಗಿದ್ದಾರೆ. ಮಕ್ಕಳೂ ಸೇರಿದಂತೆ ವಯಸ್ಕರರಿಗೂ ವಿಶೇಷ ಸೇವೆಗಳನ್ನು ಕೈಗೆಟಕುವ ದರದಲ್ಲಿ ಮತ್ತು ಸರಕಾರದ ವಿಮೆ ಯೋಜನೆಗಳಡಿಯಲ್ಲಿ ಆರೋಗ್ಯ ಸೇವೆ ನೀಡುತ್ತ ಮನೆಮಾತಾಗಿದ್ದಾರೆ.
ಚಿಕ್ಕಮಕ್ಕಳಿಗೆ ಉತ್ಕೃಷ್ಠ ದರ್ಜೆಯ ಪ್ರತ್ಯೇಕ ಚಿಕಿತ್ಸೆ ಘಟಕ, ನವಜಾತು ಶಿಶುಗಳ ಘಟಕ, ಚಿಕ್ಕ ಮಕ್ಕಳ ಎಲ್ಲ ತರಹದ ಶಸ್ತ್ರಚಿಕ್ಕಿತ್ಸೆಗಳ ವ್ಯವಸ್ಥೆ, ಮಕ್ಕಳ ಹೃದಯ ಸಂಬಂಧಿತ ಶಸ್ತ್ರಚಿಕ್ಕಿತ್ಸೆ ವ್ಯವಸ್ಥೆ ಹಾಗೂ ಕಳೆದ 30 ವರ್ಷಗಳಿಂದ ಮಕ್ಕಳ ಪುಪ್ಪಸದಲ್ಲಿಯ ಪರವಸ್ತು ತೆಗೆಯುವ ವ್ಯವಸ್ಥೆಯನ್ನು ಮಾಡುತ್ತ ಬಂದಿದ್ದಾರೆ. ಇದಲ್ಲದೆ ಮಕ್ಕಳ ಅಭಿವೃದ್ಧಿ ಕ್ಲಿನಿಕ್‌ನಿಂದ ಮಕ್ಕಳ ಮಂದ ಬೆಳವಣಿಗೆ, ಮಾತು ವಿಳಂಬ, ಸುಲೀನತೆಗೆ ಸಂಬಂಧಿಸಿದಂತೆ ಎಸ್. ಟಿ. ಬಿದರಿ ಟ್ರಸ್ಟನ್ ಅಡಿಯಲ್ಲಿ ಸೇವೆ ನೀಡುತ್ತಿದ್ದಾರೆ.
ಕಳೆದ 40 ವರ್ಷಗಳಿಂದ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಟರಿ ಐಎಂಎ ಗಳಲ್ಲಿಯೂ ಸೇವೆ ಸಲ್ಲಿಸುತ್ತ ಮಕ್ಕಳ ಲಸಿಕೆ ಕಾರ್ಯಕ್ರಮ ಹಾಗೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತಿದ್ದಾರೆ.
2005ರಲ್ಲಿ ಇಡೀ ದೇಶದಲ್ಲಿಯೇ ಮೊದಲ ಬಾರಿಗೆ ರಿಕೆಟ್ಶಿಯಲ್ ಫೀವರ್ ಅಂದರೆ ಉಣ್ಣೆಜ್ವರವನ್ನು ಪತ್ತೆ ಮಾಡಿದ ಇವರು, ಮಗುವೊಂದರಲ್ಲಿ ಕಾಣಿಸಿಕೊಂಡಿದ್ದ ಈ ಉಣ್ಣೆಜ್ವರವನ್ನು ಖಚಿತಪಡಿಸಲು ಮಗುವಿನ ರಕ್ತದ ಮಾದರಿಯನ್ನು ಅಮೇರಿಕಕ್ಕೆ ಕಳುಹಿಸಿ ಅದನ್ನು ದೃಢಪಡಿಸಿರುವುದು ಇವರು ಆರೋಗ್ಯದ ಬಗ್ಗೆ ಹೊಂದಿರುವ ಕಾಳಜಿಗೆ ಸಾಕ್ಷಿಯಾಗಿದೆ.
ಇದರ ಜೊತೆ ಭಾರತೀಯ ರೆಡ್ ಕ್ರಾಸ್ ಸೊಸೈಟಿಗೆ ಅಪಾರ ಧೇಣಿಗೆ ನೀಡಿ ಗುಣಮಟ್ಟದ ರಕ್ತನಿಧಿ ಕೇಂದ್ರವನ್ನು ಸ್ಥಾಪಿಸಲು ನೆರವು ನೀಡಿದ್ದಾರೆ. ಚೈಲ್ಡ್ ಅಕಾಡೆಮಿ ಸ್ಥಾಪಿಸುವ ಮೂಲಕ ಮಕ್ಕಳ ಕೌಶಲ್ಯಗಳನ್ನು ಬೆಳೆಕಿಗೆ ತರುವ ಕೆಲಸ ಮಾಡುತ್ತಿದ್ದಾರೆ. ಎಸ್. ಟಿ. ಬಿದರಿ ಟ್ರಸ್ಟ್ ವತಿಯಿಂದ ಬಡವರಿಗಾಗಿ ಉಚಿತ ಆರೋಗ್ಯ ಸೇವೆ, ಆರೋಗ್ಯ ಶಿಬಿರಗಳನ್ನು ನಡೆಸುತ್ತಿದ್ದಾರೆ. ಅದೇ ಟ್ರಸ್ಟ್ ಅಡಿಯಲ್ಲಿ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದಂತೆ ಬಿ. ಎಸ್ಸಿ ನರ್ಸಿಂಗ್, ಪ್ಯಾರಾಮೆಡಿಕಲ್ ಸಾಯಿನ್ಸ್ಸ್ ಕೋರ್ಸುಗಳನ್ನೂ ನಡೆಸುತ್ತಿದ್ದಾರೆ.
ಮಹಾರಾಷ್ಟçದ ಗಢಚಿರೋಲಿಯ ಪದ್ಮಶ್ರೀ ಪುರಸ್ಕೃತ ಡಾ. ಅಭಯರಾಮ ಅವರ ಮನೆಯಲ್ಲಿಯೇ ಶಿಶು ಆರೈಕೆ ಮಾದರಿಯನ್ನು ಕರ್ನಾಟಕದಲ್ಲಿಯೇ ಮೊದಲ ಬಾರಿಗೆ 15 ಹಳ್ಳಿಗಳಲ್ಲಿ ಪ್ರಾರಂಭಿಸುವ ಮೂಲಕ 25 ಮಹಿಳಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ನವಜಾತು ಶಿಶು ಮರಣ ಪ್ರಮಾಣ ಕಡಿಮೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಹೀಗಾಗಿ ಈ ಎಲ್ಲ ವೈದ್ಯಕೀಯ ಸೇವೆ, ವಿಶೇಷ ಆಸ್ಪತ್ರೆ, ಸಮಾಜಕ್ಕೆ ನೀಡಿರುವ ಸೇವೆಯನ್ನು ಪರಿಗಣಿಸಿ ಅವರಿಗೆ ರಾಜ್ಯ ಸರಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಬಸವರಾಜ ಸಂಗಪ್ಪ ಹಾರಿವಾಳ ಪ್ರತಿಕ್ರಿಯೆ
ಈ ಬಾರಿ ಬಸವನ ಬಾಗೇವಾಡಿಯ ಬಸವರಾಜ ಸಂಗಪ್ಪ ಹಾರಿವಾಳ(72) ಅವರಿಗೂ ಜಾನಪದ ವಿಭಾಗದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅವರು, ತಮ್ಮ ಆಯ್ಕೆಗೆ ಕಾರಣವಾದ ಸರಕಾರ ಮತ್ತು ಸಚಿವ ಶಿವಾನಂದ ಎಸ್. ಪಾಟೀಲ, ಈ. ಸಿ. ಈರಣ್ಣ, ಲೋಕನಾಥ ಅಗರವಾಲ, ಸುರೇಶ ಹಾರಿವಾಳ ಹಾಗೂ ಬವನಾಡಿನ ಜನತೆಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ಬಸವರಾಜ ಸಂಗಪ್ಪ ಹಾರಿವಾಳ ಹಿನ್ನೆಲೆ
ಬಸವನ ಬಾಗೇವಾಡಿಯ ಬಸವರಾಜ ಸಂಗಪ್ಪ ಹಾರಿವಾಳ ಅವರು ಕಳೆದ 35 ವರ್ಷಗಳಿಂದ ಜಾನಪದ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. 108 ಹಂತಿ ಪದಗಳನ್ನು ಬಾಯಿಪಾಠ ಮಾಡಿರುವ ಇವರು, 20 ಮಂಗಳಾರತಿ, 20 ಭಜನಾ ತತ್ವಪದಗಳು, 125 ಮಲ್ಲಿಕಾರ್ಜುನ ಕಂಬಿ ಹಾಡುಗಳು, 175 ಕೊಡೆಕಲ್ಲ ಬಸವಣ್ಣನವರ ವಚನಗಳನ್ನು ಸರಾಗವಾಗಿ ಹಾಡಬಲ್ಲವರಾಗಿದ್ದಾರೆ.
ಸಮಾಜ ಸೇವೆಯಲ್ಲಿಯೂ ಮುಂಚೂಣಿಯಲ್ಲಿರುವ ಇವರು, ಲೆಕ್ಕಪತ್ರ, ವಹಿಸಿ ಶುಭ ಕಾರ್ಯಗಳ ಯಾದಿ ಬರೆಯುವುದರಲ್ಲಿ ನಿಪುಣರಾಗಿದ್ದಾರೆ. ಪತ್ನಿ ಮಹಾದೇವಿ, ಇಬ್ಬರು ಪುತ್ರರು ಮತ್ತು ಮೂರು ಜನ ಪುತ್ರಿಯರನ್ನು ಹೊಂದಿದ್ದಾರೆ. ಶಿಶ್ವನಾಥ, ರಾಜಶೇಖರ, ಸಾವಿತ್ರಿ, ಗಾಯತ್ರಿ, ರಾಜೇಶ್ವರಿ ಇವರ ಮಕ್ಕಳಾಗಿದ್ದಾರೆ. 40ಕ್ಕೂ ಪ್ರಶಸ್ತಿಗಳನ್ನು ಇವರು ಪಡೆದಿದ್ದು, ಮೈಸೂರು, ಯಾದಗಿರಿ, ಬಾಗಲಕೋಟ ಕಾರ್ಯಕ್ರಮ ನೀಡಿದ್ದಾರೆ. 40 ಎಕರೆ ಉಳೂಮೆ ಮಾಡಿಕೊಂಡೆ ಇದನ್ನು ಮಾಡುತ್ತಿದ್ದಾರೆ. ಪದಗಳು ಹಾಡುತ್ತಲೇ ಉಳುಮೆ. 10ನೇ ತರಗತಿ ಕಲಿತಿದ್ದಾರೆ.