ವಿಜಯಪುರ: ವಕ್ಫ್ ಕಾಯ್ದೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಮಾಡಿ, ಮನವಿ ಸಲ್ಲಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಕ್ಫ್ ಕಾಯ್ದೆಯನ್ನು ರದ್ದು ಪಡಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಲಾಗುವುದು. ನವೆಂಬರ್ 4 ರಂದು ಸೋಮವಾರ ಭಾರತೀಯ ಕಿಸಾನ ಸಂಘಕ್ಕೆ ಬಂಬಲಿಸಿ ಪ್ರತಿಭಟನೆಯಲ್ಲಿ ನಾವೂ ಭಾಗಿಯಾಗಲಿದ್ದೇವೆ. ಈ ಮೂಲಕ ಜನಜಾಗೃತಿ ಮಾಡೂಲಿಸುವುದು, ರಾಜ್ಯ ಸರಕಾರಕ್ಕೆ ಎಚ್ಚರಿಕೆ ಕೊಡಲಾಗುವುದು ಎಂದು ತಿಳಿಸಿದರು.
ಸಿಎಂ ಸೂಚನೆ ಮೇರೆಗೆ ವಕ್ಫ್ ಸಚಿವ ಜಮೀರ್ ಅಹಮ್ಮದ ಖಾನ್ ವಕ್ಫ್ ಅದಾಲತ್ ಮಾಡಿ ಅವರು ಕಾರಣರಾಗಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ರೈತರು, ಮಠಮಾನ್ಯಗಳು ಭಯಭೀತರಾಗಿದ್ದಾರೆ. ಇತ್ತೀಚೆಗೆ ಯತ್ನಾಳ, ಜಿಗಜಿಣಗಿ ನೇತ್ರತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಿಜೆಪಿ ಮುಖಂಡರ ಅಧ್ಯಯನ ತಂಡ ಕೂಡ ಭೇಟಿ ನೀಡಿದೆ. ಸಿಂದಗಿ, ಯರಗಲ್ ಬಿ. ಕೆ., ಪಡಗಾನೂರ, ಹಡಗಲಿ ಸೇರಿದಂತೆ ಎಲ್ಲಡೆ ವಕ್ಫ್ ವ್ಯಾಪಿಸಿದೆ. ಎಲ್ಲಾ ಮಾಡುವುದು ಮಾಡಿ ನೊಟೀಸ್ ವಾಪಸ್ ಪಡೆಯುತ್ತೇವೆ ಎಂದು ಸಿಎಂ ಹೇಳುತ್ತಿದ್ದಾರೆ., ಈ ಮೂಲಕ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ನೊಟೀಸ್ ಕೊಟ್ಟಾಗ ಕಾಲಮಿತಿ ಮೀರಿದೆ ಎಂದು ಹೇಳಿ ಆಸ್ತಿ ತಮ್ಮದು ಮಾಡಿಕೊಳ್ಳುತ್ತಾರೆ. ಹೀಗಾಗಿ ವಕ್ಫ್ ಕಾಯಿದೆ ರದ್ದಾಗಬೇಕು. ವಿವಾದಗಳನ್ನೇ ಮಾಡುತ್ತ ರಾಜ್ಯ ಸರಕಾರ ಜನರಿಗೆ ಸಂಕಷ್ಟಕ್ಕೆ ಸಿಲುಕಿಸುತ್ತಿದೆ. ಸೋಮವಾರ ನಡೆಯುವ ಹೋರಾಟದಲ್ಲಿ ಮಹಾರಾಷ್ಟ್ರದ ಕೊಲ್ಹಾಪುರ ಕನ್ಹೇರಿ ಮಠದ ಕಾಡಸಿದ್ಧೇಶ್ವರ ಶ್ರೀಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.
ವಿಧಾನ ಪರಿಷತ ಮಾಜಿ ಶಾಸಕ ಅರುಣ ಶಹಾಪುರ ಮಾತನಾಡಿ, 1974ರ ಗೆಜೆಟ್ ವಕ್ಫ್ ಸಮಸ್ಯೆಗೆ ಮೂಲವಾಗಿದೆ. ಅರ್ಧ ಶತಮಾನದ ಹಿಂದಿನ ಆದೇಶ ಇಟ್ಟುಕೊಂಡು ಈಗ ಅದನ್ನು ಕಾರ್ಯರೂಪಕ್ಕೆ ತರಲು ಹೊರಟಿದ್ದಾರಲ್ಲ. ಇಷ್ಟು ವರ್ಷ ಏನು ದನ ಕಾಯ್ದರಾ? ಈಗ ಜಾರಿಗೆ ತರಲು ಹೊರಟಿರುವ ದುರುದ್ಧೇಶ ಏನು? ಪಟ್ಟಬದ್ಧ ಹಿತಾಸಕ್ತಿಗಳು ಆಸ್ತಿ ಕೊಳ್ಳೆ ಹೊಡೆಯುವುದನ್ನು ತಪ್ಪಿಸಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಬೇಕು. ಕೇಂದ್ರದಲ್ಲಿ 1995ರಲ್ಲಿ ವಕ್ಫ್ ಆಕ್ಟ್ ತಿದ್ದುಪಡಿಗೆ ಮುಂದಾಗಿದ್ದರಿಂದ ಇವರು ಈಗ ಈ ದುರುದ್ದೇಶದ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು ಮುಸ್ಲಿಮರ ದಾರಿತಪ್ಪಿಸಿ ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ವಕ್ಫ್ ಪರವಾಗಿ ಕಾನೂನಾತ್ಮಕ ಡಾಕುಮೆಂಟ್ ಮಾಡಲು ಮುಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಈರಣ್ಣ ರಾವೂರ, ಸಾಬು ಮಾಶ್ಯಾಳ, ವಿಜಯ ಜೋಶಿ ಮುಂತಾದವರು ಉಪಸ್ಥಿತರಿದ್ದರು.