ನೋಟೀಸುಗಳನ್ನು ವಾಪಸ್ ಪಡೆಯುವಂತೆ ವಕ್ಫ್ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ ಸಚಿವ ಜಮೀರ್ ಅಹ್ಮದ್ ಖಾನ್

ವಿಜಯಪುರ: ರೈತರಿಗೆ ನೀಡಲಾಗಿರುವ ನೋಟೀಸ್ ನ್ನು ಹಿಂಪಡೆಯುವಂತೆ ಸಿಎಂ ವಕ್ಫ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಬಿ. ಝ್. ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.

ವಿಜಯಪುರದಲ್ಲಿ ತಮ್ನನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತನಾಡಿದ ಅವರು, ವಕ್ಪ್ ನೋಟಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ನನ್ನನ್ನು ಸಹ ಮೀಟಿಂಗ್ ಗೆ ಕರೆದಿದ್ದರು.  ಆದರೆ, ನಾನು ಸಂಡೂರಿನಲ್ಲಿದ್ದ ಕಾರಣ ಹೋಗಲು ಆಗಿಲ್ಲ.  ಹೀಗಾಗಿ ಸಿಎಂ ಮೀಟಿಂಗ್ ಮಾಡಿ ನಿರ್ಧಾರ ತಗೆದುಕೊಂಡಿದ್ದಾರೆ.  ಎಲ್ಲ ನೋಟಿಸ್ ವಾಪಸ್ ಪಡೆಯಬೇಕು ಎಂದು ವಕ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.  ಯಾವ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ನಾನು ನಿನ್ನೆಯೂ ಹೇಳಿದ್ದೆ.  ರೈತರಿಗೆ ತೊಂದರೆ ಕೊಡಬೇಕು ಎಂಬುದು ನಮ್ಮ ಉದ್ದೇಶವಲ್ಲ.  ಕಳೆದ ಒಂದು ತಿಂಗಳಲ್ಲಿ ನೋಟಿಸ್ ಜೊತೆಗೆ ಈ ಹಿಂದೆ ನೀಡಿದ್ದ ಎಲ್ಲ ನೋಟಿಸ್ ಗಳನ್ನ ಹಿಂಪಡೆದಿದ್ದೇವೆ ಎಂದು ಅವರು ಹೇಳಿದರು.

ಇದಕ್ಕೂ ಮುಂಚೆ ಮಾತನಾಡಿದ ಅವರು, ವಕ್ಫ್ ವಿಚಾರದಲ್ಲಿ ಬಿಜೆಪಿ ಅವರು ಅನವಶ್ಯಕ ಗೊಂದಲ ಸೃಷ್ಟಿ ಮಾಡಿದ್ದಾರೆ.  ಬಿಜೆಪಿಯವರಿಗೆ ಬೇರೆ ಯಾವುದೇ ಇಶ್ಯೂ ಈಗಿಲ್ಲ.  ಮುಡಾ ಹೊಯ್ತು ಈಗ ವಕ್ಫ್ ಬಂದಿದೆ.  ಮುಡಾದಲ್ಲಿ ಏನಿಲ್ಲ ಎಂದು ಗೊತ್ತಾಯ್ತು.  ಈಗ ವಕ್ಫ್ ಹಿಡಿದುಕೊಂಡಿದ್ದಾರೆ.  ಈಗ ರಾಜ್ಯದಲ್ಲಿ ಮೂರು ಕಡೆ ಬೈ ಎಲೆಕ್ಷನ್ ಇದೆ.  ಮಹಾರಾಷ್ಟ್ರದಲ್ಲಿ ಚುನಾವಣೆ ಇದೆ.  ಪಾಲಿಟಿಕಲ್ ಗಿಮಿಕ್ ಗಾಗಿ ಈ ರೀತಿ ಮಾಡುತ್ತಿದ್ದಾರೆ.  ರಾಜಕೀಯ ಮಾಡುವ ಹಾಗಿದ್ದರೆ ನಮ್ಮ ಜೊತೆ ಮಾಡಿ ಜನರಿಗೆ ದಾರಿ ತಪ್ಲಿಸಬೇಡಿ ಎಂದು ಸಚಿವರು ಹೇಳಿದರು.

ಬೈ ಎಲೆಕ್ಷನ್ ನಂತರ ಡಿಸಿಎಂ ಡಿ. ಕೆ. ಶಿವಕುಮಾರ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ಸಿನ ಕೆಲವು ನಾಯಕರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ.  ಐದು ವರ್ಷ ಸಿದ್ದರಾಮಯ್ಯ ನವರೇ ಸಿಎಂ ಆಗಿರುತ್ತಾರೆ.  ಕೆಲವರು ಅವರರವರ ಅಭಿಪ್ರಾಯ ಹೇಳುತ್ತಾರೆ.  ನನ್ನ ಅಭಿಪ್ರಾಯ ನಾನು ಹೇಳಿರುವೆ.  ಸಿಎಂ ಸ್ಥಾನದಲ್ಲಿ ಟಗರು ಕೂತಿದೆ.  ಅವರನ್ನು ಅಲ್ಲಾಡಿಸಲು ಆಗಲ್ಲ ಎಂದು ಅವರು ಹೇಳಿದರು.

ಅಲ್ಲಾ ನ ಆಸ್ತಿ ಎಲ್ಲಿಂದ ಬಂತು ಎಂಬ ಕೇಂದ್ರ ಸಚಿವ ಜೋಶಿ ಹೇಳಿಕೆ ವಿಚಾರ ಕುರಿತು ಖಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಬಗ್ಗೆ ಅವರಿಗೆ ಬುದ್ದಿ ಇರಬೇಕು.  ವಕ್ಫ್ ಎಂದರೆ ಅಲ್ಲಾನ ಆಸ್ತಿ ಎನ್ನುತ್ತೇವೆ.  ಇದು ಜೋಶಿ ಅವರು ಕೊಟ್ಟ ಆಸ್ತಿ ಅಲ್ಲ.  ಸರಕಾರದಿಂದ ಕೊಟ್ಟ ಆಸ್ತಿ ಅಲ್ಲ.  ಇದು ದಾನಿಗಳು ದಾನ ಮಾಡಿರುವ ಆಸ್ತಿ.  ಹಿಂದೆ ಬಸವರಾಜ ಬೊಮ್ಮಾಯಿ ಅವರೇ ವಕ್ಫ್ ಆಸ್ತಿ ಅತಿಕ್ರಮಣ ಆಗುತ್ತಿದೆ ಎಂದು ಒಂದು ಕಾರ್ಯಕ್ರಮದಲ್ಲಿ ಮಾತಾನಾಡಿದ್ದಾರೆ.  ಹಾಗಿದ್ದರೆ ಬಸವರಾಜ್ ಬೊಮ್ಮಾಯಿ ಯಾಕೆ ಆ ರೀತಿ ಹೇಳುತ್ತಿದ್ದರು ಎಂದು ಅವರು ಪ್ರಶ್ನಿಸಿದರು.  ಅಲ್ಲದೇ, ಅಂದು ಬಸವರಾಜ ಬೊಮ್ಮಾಯಿ ಮಾತನಾಡಿರುವ ವಿಡಿಯೋ ಪ್ರದರ್ಶಿಸಿದರು.

ವಕ್ಫ್ ಇರಲಿ, ಮುಜರಾಯಿ ಇರಲಿ ಎಲ್ಲವೂ ದೇವರ ಆಸ್ತಿ.  ಮುಜರಾಯಿ ಇಲಾಖೆಗೆ ಸೇರಿದ 36 ಸಾವಿರ ಎಕರೆ ಆಸ್ತಿ ಇದೆ.  ಅದರಲ್ಲೂ 800 ಎಕರೆ ಅತೀಕ್ರಮಣವಾಗಿದೆ.  ಇದನ್ನು ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರೇ ಸಿಎಂ ಆಗಿದ್ದಾಗ ಹೇಳಿಕೆ ನೀಡಿದ್ದಾರೆ ಎಂದು ಅವರು ಹೇಳಿದರು.

ವಿಜಯಪುರ ಜಿಲ್ಲೆಯ ಹೊನವಾಡದಲ್ಲಿ ಕೇವಲ 11ಎಕರೆ ಮಾತ್ರ ವಕ್ಫ್ ಗೆ ಸೇರಿದ ಆಸ್ತಿ ಇದೆ.  ಅಲ್ಲಿ 1200 ಎಕರೆ ಇದೆ ಎಂದು ಹೇಳಿದ್ದಾರೆ.  ಅಲ್ಲಿ ಯಾರಿಗೂ ನಾವು ನೋಟಿಸ್ ನೀಡಿಲ್ಲ.  ಬಿಜೆಪಿ ಸರಕಾರದಲ್ಲೂ ವಕ್ಫ್ ಆಸ್ತಿ ಅತಿಕ್ರಮಿಸಿದವರಿಗೆ ನೋಟಿಸ್ ನೀಡಲಾಗಿದೆ.  ಬಿಜೆಪಿ ಸರಕಾರದಲ್ಲಿ ಸಾವಿರಾರು ಜನರಿಗೆ ನೋಟಿಸ್ ನೀಡಿದೆ.  ವಕ್ಫ್ ದಲ್ಲಿ ಒಂದು ಇಂಚು ಸರಕಾರದ್ದು ಇಲ್ಲ.  ವಕ್ಫ್ ಆಸ್ತಿ ಸಾಕಷ್ಟು ಒತ್ತುವರಿಯಾಗಿದೆ.  ರಾಜ್ಯದಲ್ಲಿರುವ 1 ಲಕ್ಷ 12 ಸಾವಿರ ಎಕರೆ ಆಸ್ತಿಯನ್ನು ದಾನಿಗಳು ವಕ್ಫ್ ಗೆ ದಾನ ಮಾಡಿದ್ದಾರೆ.  ಅದರಲ್ಲಿ 80 ಸಾವಿರ ಎಕರೆ ಅತೀಕ್ರಮಣವಾಗಿದೆ.  ಕೇವಲ 33 ಸಾವಿರ ಎಕರೆ ವಕ್ಫ್ ಬೊರ್ಡ ಕೈಯಲ್ಲಿದೆ.  ಅದನ್ನು ಉಳಿಸುವ ಕೆಲಸ ಮಾಡುತ್ತಿರುವೆ ಎಂದು ಸಚಿವರು ತಿಳಿಸಿದರು.

41 ಪ್ರಾಚೀನ ಸ್ಮಾರಕಗಳಿಗೆ ವಕ್ಫ್ ಬೋರ್ಡನಿಂದ ನೋಟಿಸ್ ನೀಡಿರುವ ಕುರಿತು ಕೇಳಲಾದ ಉತ್ತರಿಸಿದ ಅವರು, ಗೋಲಗುಂಬಜ್ ನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಬಿಟ್ಟು ಕೊಟ್ಟಿದ್ದೇವೆ.  ಗೋಲಗುಂಜ್ ನ್ನು ಕೇಂದ್ರದವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.  ನಾವು ಯಾರಿಗೂ ನೋಟಿಸ್ ಕೊಟ್ಟಿಲ್ಲ.  ರೈತರ ಆಸ್ತಿ‌ನಾವು ಮುಟ್ಟಲ್ಲ.  ಆದರೆ, ದಾನಿಗಳು ದಾನ ಮಾಡಿರುವ ಆಸ್ತಿ‌ಅತೀಕ್ರಮಣ ಮಾಡಿದ್ದರೆ ನಾವು ಬಿಡಲ್ಲ ಎಂದು ಅವರು ಸ್ಪಷ್ಪಡಿಸಿದರು.

ವಕ್ಫ್ ಆಸ್ತಿಯನ್ನು ಶೇ. 90 ರಷ್ಟು ಮುಸ್ಲಿಮರೇ ಒತ್ತುವರಿ ಮಾಡಿಕೊಂಡಿದ್ದಾರೆ.  ಆ ಆಸ್ತಿಯನ್ನ ಮರಳಿ ಪಡೆಯುವ ಕೆಲಸ ಮಾಡುತ್ತೇನೆ.  ಬೀದರ್ ನಲ್ಲಿ ನಾಲ್ಕು ಅತೀಕ್ರಮಣ ಮಾಡಿದ್ದನ್ನು ವಾಪಸ್ ಪಡೆದಿದ್ದೇವೆ.  ಈ ರೀತಿ ಒತ್ತುವರಿ ಆಗಿದ್ದನ್ನು ವಾಪಸ್ ಪಡೆಯುತ್ತೇವೆ.  ಒತ್ತುವರಿ ಮಾಡಿ‌ರುವವರ ವ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ.  ಮೊದಲು ನಮ್ಮ ಆಸ್ತಿ ವಾಪಸ್ ಪಡೆಯತ್ತೇವೆ ಎಂದು ಅವರು ಹೇಳಿದರು.

ಯಾವುದೇ ಕಾರಣಕ್ಕೂ ನಾವು ಗ್ಯಾರಂಟಿ ಯೋಜನೆಗಳನ್ನು ವಾಪಸ್ ಪಡೆಯುವುದಿಲ್ಲ.  ಲೋಕಸಭೆ ಚುನಾವಣೆ ಮೇಲೆ ಗ್ಯಾರಂಟಿ ಪರಿಣಾಮ ಬೀರಲ್ಲ.  ಆಗ ಕೆಲ ನಾಯಕರು ಗ್ಯಾರಂಟಿ ತಗೆಯಿರಿ ಎಂದು ಹೇಳಿದ್ದರು.  ಆಗ ಸಿಎಂ ಸಿದ್ದರಾಮಯ್ಯ ನವರು ನಾನಿರುವ ವರೆಗೆ ಸರಕಾರ ಇರುವ ವರೆಗೆ ಗ್ಯಾರಂಟಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದರು ಎಂದು ಸಚಿವ ಬಿ. ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.

Leave a Reply

ಹೊಸ ಪೋಸ್ಟ್‌