ವಿಜಯಪುರ: ಭೂತ್ನಾಳ ಕೆರೆ ಮತ್ತು ಬೇಗಂ ತಾಲಾಬ್ ಬಳಿ ಪ್ರವಾಸೋದ್ಯಮ ಅಭಿವೃದ್ಧಿಗೆ ಕೈಗೊಳ್ಳಲಾಗಿರುವ ಅಭಿವೃದ್ಧಿ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಒದಗಿಸಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶನಿವಾರ ಬೆಳಿಗ್ಗೆ ಕರಾಡದೊಡ್ಡಿ ಮಾನವ ನಿರ್ಮಿತ ಅರಣ್ಯ ಪ್ರದೇಶ, ಭೂತನಾಳ ಕೆರೆ, ಐತಿಹಾಸಿಕ ಬೇಗಂ ಕೆರೆಗಳಿಗೆ ಅವರು ಭೇಟಿ ನೀಡಿದರು.
ಮೊದಲಿಗೆ ಭೂತ್ನಾಳ ಕೆರೆಯ ಹಿಂಭಾಗದಲ್ಲಿರುವ ಕರಾಡದೊಡ್ಡಿ ಮಾನವ ನಿರ್ಮಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ಅವರು ಅಲ್ಲಿ ನಿರ್ಮಿಸಲಾಗುತ್ತಿರುವ ಲಾನ್, ಉದ್ಯಾನ ಮತ್ತೀತರ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಅಲ್ಲದೇ, ಕೆರೆಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಗ್ರೀಲ್ ಮತ್ತು ತಂತಿಬೇಲಿ ಅಳವಡಿಸುವ ಮೂಲಕ ಸುರಕ್ಷತೆಗೆ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮೊಬೈಲ್ ಮೂಲಕ ದೂರವಾಣಿ ಕರೆ ಮಾಡಿ ಸೂಚನೆ ನೀಡಿದರು.
ನಂತರ ಇದೇ ಕೆರೆಯ ಬಳಿ ಕೆಬಿಜೆಎನ್ಎಲ್ ಆಲಮಟ್ಟಿ ಅರಣ್ಯ ವಿಭಾಗದ ನರ್ಸರಿಗೆ ಭೇಟಿ ನೀಡಿದ ಸಚಿವರು ಅಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿದರು.
ಬಳಿಕ ಭೂತ್ನಾಳ ಕೆರೆಯ ತೀರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನಿರ್ಮಿಸಲಾಗಿರುವ ಫುಡ್ ಕೋರ್ಟ್, ಉದ್ಯಾನ, ಮಕ್ಕಳ ಆಟಿಕೆಗಳು, ಕಾರಂಜಿಗಳು, ಬಯಲು ವ್ಯಾಯಾಮ ಶಾಲೆ ಕಾಮಗಾರಿಗಳನ್ನು ಸಚಿವರು ವೀಕ್ಷಿಸಿದರು. ಈ ಅಭಿವೃದ್ಧಿ ಕಾಮಗಾರಿಗಳಿಂದಾಗಿ ವಿಜಯಪುರ ನಗರದ ಜೀವಸೆಲೆಗಳಲ್ಲಿ ಒಂದಾದ ಈ ಕೆರೆಗೆ ಹೊಸ ತೇಜಸ್ಸು ಬಂದಿದೆ. ಶೀಘ್ರದಲ್ಲೇ ಬಾಕಿ ಉಳಿದಿರುವ ಕೆಲಸಗಳನ್ನು ಪೂರ್ಣಗೊಳಿಸಿ, ನಗರದ ಜನತೆ ಈ ಕೆರೆಯ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಅವಕಾಶ ಕಲ್ಪಿಸುವವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಕರೆ ಮಾಡಿ ಸೂಚನೆ ನೀಡಿದರು.
ಅಲ್ಲಿಂದ ಐತಿಹಾಸಿಕ ಬೇಗಂ ತಲಾಬ್ ಕೆರೆಗೆ ಭೇಟಿ ನೀಡಿದ ಸಚಿವರು, ಈ ಹಿಂದೆ ತಾವು ಜಲಸಂಪನ್ಮೂಲ ಸಚಿವರಾಗಿದ್ದಾಗ R ಕೆರೆಯ ಆವರಣದಲ್ಲಿ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿಗಳ ಪರಿಶೀಲನೆ ನಡೆಸಿದರು. ಅಲ್ಲದೇ, ಈ ಅವಧಿಯಲ್ಲಿ ಬೇಗಂ ತಾಲಾಬ್ ಮತ್ತು ಭೂತ್ನಾಳ ಕೆರೆಗಳನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಕೈಗೊಂಡಿರುವ ಸೌಂದರ್ಯೀಕರಣದ ಕ್ರಮಗಳು ಮುಕ್ತಾಯದ ಹಂತ ತಲುಪಿದ್ದು, ಶೀಘ್ರದಲ್ಲಿಯೇ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ ಎಂದು ತಿಳಿಸಿದರು.