ಸ್ನೇಹ ಸಂಬಂಧ ಎಲ್ಲದಕ್ಕಿಂತ ಮಿಗಿಲು- ಶಾಸಕ ಸುನೀಲಗೌಡ ಪಾಟೀಲ

ವಿಜಯಪುರ: ಗೆಳೆತನ ಎಲ್ಲಕ್ಕಿಂತ ಮಿಗಿಲು.  ಶ್ಲಾಘಿಸಿದರೆ ಹಿಗ್ಗದೆ, ಟೀಕಿಸಿದರೆ ಕುಗ್ಗದೆ ಸದಾ ಮಂದಸ್ಮಿತರಾಗಿರುವ ವ್ಯಕ್ತಿಗಳು ಸಿಗುವುದು ಅಪರೂಪ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.

ನಗರದ ಐಓಸಿ ಬಳಿಯ ಮಹಾಲ ಬಾಗಾಯತ ಕೈಗಾರಿಕೆ ಪ್ರದೇಶದಲ್ಲಿ ಶುಕ್ರವಾರ ನಡೆದ ಮೇ. ರಜನಿ ಸ್ಟೀಲ್ ವರ್ಕ್ಸ್ 29ನೇ ವರ್ಷದ ಸಂಭ್ರಮಾಚರಣೆ, ಕನ್ನಡ ರಾಜ್ಯೋತ್ಸವ ಮತ್ತು ಸ್ನೇಹಜೀವಿ ಡಾ. ಗಂಗಾಧರ ಸಂಬಣ್ಣಿ ಅವರ 50ನೇ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.

ಟ್ರೇಲರ್ ಗಳು ಎಲ್ಲ ಕಂಪನಿಯ ಟ್ರ್ಯಾಕ್ಟರ್ ಗಳೊಂದಿಗೆ ಹೊಂದಾಣಿಕೆಯಾಗುತ್ತವೆ.  ಅದೇ ರೀತಿ ಡಾ. ಗಂಗಾಧರ ಸಂಬಣ್ಣಿ ಎಲ್ಲ ವಯೋಮಾನದ ಗೆಳೆಯರೊಂದಿಗೆ ಹೊಂದಾಣಿಕೆಯಿಂದಿರು ವ್ಯಕ್ತಿ.  ಯಾವಾಗಲೂ ಶಾಂತಚಿತ್ತದಿಂದ ಸಹಬಾಳ್ವೆ ನಡೆಸುವ ನಿಷ್ಕಲ್ಮಷ ಗುಣ ಹೊಂದಿದ್ದಾರೆ.  ವಿದ್ಯಾರ್ಥಿ ದೆಸೆಯಿಂದಲೂ ಜನಪರ ವಿಚಾರಗಳಿಗೆ ಬೆಂಬಲ ನೀಡುತ್ತ, ಅಜಾತ ಶತ್ರು ಎನಿಸಿದ್ದಾರೆ.  ಅರ್ಧ ಶತಕ ಸಾರ್ಥಕ ಬದುಕು ಸಾಗಿಸಿರುವ ಅವರು ಶತಕ ಬಾರಿಸಲಿ ಎಂದು ಶುಭ ಹಾರೈಸಿದರು.

ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ನಗು ಮುಖ್ಯವಾಗಿದ್ದು, ಬದುಕಿಗೆ ಅರ್ಥ ಬರುವಂತೆ ಬದುಕಬೇಕು.  ಕಷ್ಟದ ನಡುವೆಯೂ ನಗುವುದೇ ಜೀವನ.  ಎಲ್ಲರಿಗೂ ಬೇಕಾಗುವ ರೀತಿಯಲ್ಲಿ, ಪರೋಪಕಾರಿಯಾಗಿ ಸಮಯ ಕಳೆಯಬೇಕು.  ಅದರ ಜೊತೆಯಲ್ಲಿಯೇ ಬೆಳೆದು ದೊಡ್ಡವರಾಗಬೇಕು.  ನಾನು ಎಂಬುದಕ್ಕಿಂತ ನನ್ನ ಜೊತೆಯಲ್ಲಿ ಇರುವರೊಂದಿಗೆ ಬದುಕುವುದು ಮುಖ್ಯ.  ಅದರಲ್ಲೂ ಉದ್ಯಮ ಸ್ಥಾಪಿಸಿ ಮತ್ತೋಬ್ಬರಿಗೆ ಉದ್ಯೋಗ ನೀಡುವುದು ಪುಣ್ಯದ ಕೆಲಸ.  ಡಾ. ಗಂಗಾಧರ ಸಂಬಣ್ಣಿ ಅವರು ಟ್ರೈಲರ್ ಉದ್ಯಮ ಪ್ರಾರಂಭಿಸುವ ಮೂಲಕ ರೈತರ ಪರ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ವಿಜಯಪುರದಲ್ಲಿ ಮೇ. ರಜನಿ ಸ್ಟೀಲ್ ವರ್ಕ್ಸ್ 29ನೇ ವರ್ಷದ ಸಂಭ್ರಮಾಚರಣೆ, ಕನ್ನಡ ರಾಜ್ಯೋತ್ಸವ ಮತ್ತು ಸ್ನೇಹಜೀವಿ ಡಾ. ಗಂಗಾಧರ ಸಂಬಣ್ಣಿ ಅವರ 50ನೇ ಜನ್ಮದಿನ ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿದರು.

ಮಾಜಿ ಶಾಸಕ ಪ್ರೊ. ರಾಜು ಆಲಗೂರ ಮಾತನಾಡಿ, ಕಷ್ಟಗಳಿಗೆ ತಕ್ಷಣ ಸ್ಪಂದಿಸುವ ಮತ್ತು ಪರೋಪಕಾರ ಗುಣ ನಮ್ಮನ್ನು ಉನ್ನತ ಸ್ಥಾನದಲ್ಲಿರಿಸುತ್ತದೆ.  ತಮ್ಮ ಜೀವನದಲ್ಲಿ ಯಾರಿಗೂ ನೋಯಿಸದ ಮತ್ತು ಯಾವುದೇ ವ್ಯಕ್ತಿಯ ಹಿಂದೆಯೂ ಯಾವುದೇ ಟೀಕೆ ಮಾಡದ ಸರಳ ಸಜ್ಜನ ವ್ಯಕ್ತಿಯಾಗಿರುವ ಡಾ. ಗಂಗಾಧರ ಸಂಬಣ್ಣಿ ಅವರ ಜೀವನ ಮಾದರಿಯಾಗಿದೆ ಎಂದು ಹೇಳಿದರು.

ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಸನ್ಮಾರ್ಗದಲ್ಲಿ, ಸಚ್ಚಾರಿತ್ರ್ಯದಿಂದ ಜನಮಾನಸದೊಂದಿಗೆ 50 ವರ್ಷ ಬದುಕು ಸಾಗಿಸುವುದು ಇಂದಿನ ದಿನಗಳಲ್ಲಿ ಸವಾಲಾಗಿದೆ.  ಡಾ. ಸಂಬಣ್ಣಿ ವ್ಯವಹಾರದಲ್ಲಿ ಏಕಾಗ್ರತೆಯಿಂದ ಮುಂದುವರೆದಿದ್ದರೆ ಬೃಹತ್ ಉದ್ಯಮಿಯಾಗುತ್ತಿದ್ದರು.  ಮುಗ್ದ ಸ್ವಭಾವದ ಅವರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ.  ಇಂದಿನ ದಿನಗಳಲ್ಲಿ ಸ್ಥಿರಾಸ್ಥಿಗಳಿಗಿಂತ ಗೆಳೆತನವೇ ಶಾಶ್ವತ ಆಸ್ತಿಯಾಗಿದೆ.  ಕಷ್ಡ, ಸುಖಗಳಲ್ಲಿ ಗೆಳೆತನದಿಂದಲೇ ತಕ್ಷಣ ಸ್ಪಂದನೆ ಸಿಗುತ್ತದೆ ಎಂದು ಹೇಳಿದರು.

ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ಕೋಪ ಶಬ್ದಕ್ಕೆ ವಿರುದ್ಧವಾಗಿರುವ ಶಾಂತ ಸ್ವಭಾವದ, ಎಲ್ಲ ಸಮುದಾಯದ ಜನರು ಪ್ರೀತಿಸುವ ಜಾತ್ಯತೀತ, ಹೃದಯ ಶ್ರೀಮಂತ ಗೆಳೆಯರಾಗಿ ಡಾ. ಸಂಬಣ್ಣಿ ಎಲ್ಲರಿಗೂ ಅಚ್ಚುಮೆಚ್ಚಾಗಿದ್ದಾರೆ ಎಂದು ಹೇಳಿದರು.

ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಮಾತನಾಡಿ, ಕಠಿಣ ಪರಿಶ್ರಮದಿಂದ ಸಾಧನೆಯ ಮೂಲಕ ಉದ್ಯಮಿಯಾಗಿದ್ದು ಇತರರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ಗಂಗಾಧರ ಸಂಬಣ್ಣಿ ಪತ್ನಿ ಭಾಗ್ಯಶ್ರೀ, ಸಹೋದರ ಚಿದಾನಂದ ಸಂಬಣ್ಣಿ, ಪೀಟರ್ ಅಲೆಕ್ಸಾಂಡರ್, ಗುರುನಾಥ ಕಾಪಸೆ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌