ವಿಜಯಪುರ: ಚುನಾವಣೆ ಪ್ರಣಾಳಿಕೆಯಲ್ಲಿ ವಕ್ಫ್ ಆಸ್ತಿ ಸಂರಕ್ಷಣೆ ಮಾಡುವುದಾಗಿ ಬಿಜೆಪಿ ಹೇಳಿತ್ತು. ಆದರೆ, ಈಗ ಆ ಪಕ್ಷದ ಮುಖಂಡರು ವಕ್ಫ್ ಹೋರಾಟ ನಡೆಸುತ್ತಿರುವುದು ಹಾಸ್ಯಾಸ್ಪದ ಎಂದು ಮಾಜಿ ಶಾಸಕ ಪ್ರೊ. ರಾಜು ಆಲಗೂರ ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ವಕ್ಫ್ ಆಸ್ತಿ ಸಂರಕ್ಷಣೆಗೆ ಸಂಬಂಧಿಸಿದಂತೆ ಸಂಸತ್ತಿನಲ್ಲಿ ಪ್ರಶ್ನೆ ಮಾಡಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಈಗ ವಕ್ಫ್ ಹೋರಾಟದಲ್ಲಿ ಭಾಗಿಯಾಗುವ ಯಾವ ನೈತಿಕತೆಯೂ ಇಲ್ಲ. ವಕ್ಪ್ ಆಸ್ತಿ ಸಂರಕ್ಷಣೆ ಮತ್ತು ಅತೀಕ್ರಮಣ ತೆರವು ಸೇರಿದಂತೆ ಅನೇಕ ರೀತಿಯಲ್ಲಿ ವಕ್ಫ್ ಗೆ ಪೂರಕವಾಗಿ ಶೋಭಾ ಕರಂದ್ಲಾಜೆ ಅವರು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರ ಇಲಾಖೆಯ ಸಚಿವರಿಗೆ ಪ್ರಶ್ನೆಗಳನ್ನು ಕೇಳಿದ್ದರು. ಈಗ ವಕ್ಫ್ ಕಾಯಿದೆ ರದ್ದುಗೊಳಿಸುವ ಹೋರಾಟದಲ್ಲಿ ಭಾಗಿಯಾಗಿರುವುದು ಅವರಿಗೆ ಶೋಭೆ ತರುವ ವಿಷಯವಲ್ಲ ಎಂದು ಹೇಳಿದರು.
ರೈತರ ಜಮೀನು ಯಾವ ಕಾರಣಕ್ಕೂ ವಕ್ಫ ಗೆ ಹೋಗಲು ಬಿಡುವುದಿಲ್ಲ ಎಂದು ನಾವು ಸಹ ಬದ್ದತೆ ಪ್ರದರ್ಶಿಸುತ್ತೇವೆ. ವಕ್ಫ್ ವಿಚಾರವಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಜಿಲ್ಲಾ ಮಂತ್ರಿಗಳು ಸ್ಪಷ್ಟನೆ ಕೊಟ್ಟರೂ ಸುಮ್ಮನೆ ಆರೋಪ ಮಾಡಲಾಗುತ್ತಿದೆ. ಸಿಎಂ ಹಿಂದುಳಿದ ಸಮುದಾಯಕ್ಕೆ ಸೇರಿದ್ದಾರೆ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿದ್ದಾರೆ. ಬಿಜೆಪಿಯವರು ದೇಶವನ್ನು ಮರಳು ಮಾಡುತ್ತಿದ್ದಾರೆ. ಕೇಂದ್ರ ಮಂತ್ರಿ ಶೋಭಾ ಕರಂದ್ಲಾಜೆ ಭಾಗವಹಿಸಿ ಕ್ಯಾಂಪ್ ಮಾಡಿದ್ದಾರೆ. ಅವರು ತಮ್ಮನ್ನು ತಾವೇ ಪ್ರಶ್ನೆ ಮಾಡಿಕೊಳಬೇಕು. ವಕ್ಫ್ ಬೋರ್ಡ್ ರಕ್ಷಣೆ ಮಾಡಬೇಕು. ಅವುಗಳ ಸಂಖ್ಯೆ ಎಷ್ಟು ಎಂಬುದನ್ನು ಡಿಜಿಟಲೀಕರಣ ಮಾಡಬೇಕು. ಅಕ್ರಮ ಮಾಡಿದ್ದರೆ ಅದನ್ನು ತೆಗೆದು ಅವರಿಗೆ ಕೊಡಬೇಕು. ವಕ್ಫ್ ಆಸ್ತಿ ಬಗ್ಗೆ ಎಲ್ಲಾ ಆಸ್ತಿಗಳನ್ನು ಕೇಳಿದ್ದು, ಆರ್ಥಿಕ ನೆರವು ನೀಡಬೇಕು. ರಕ್ಷಣೆ ಮಾಡಬೇಕು ಶೋಭಾ ಕರಂದ್ಲಾಜೆ 2019ರಲ್ಲಿ ಸಂಸತ್ತಿನ್ನು ಪ್ರಶ್ನೆ ಮಾಡಿದ್ದಾರೆ.
ಆದರೆ ಇಂದು ವಕ್ಫ್ ಬೋರ್ಡ್ ರದ್ದಾಗಬೇಕು ಎಂದು ಇಲ್ಲಿ ಭಾಗವಹಿಸಿ ಭಾಷಣ ಮಾಡಿದ್ದಾರೆ. ನಾನು ಏನು ಕೇಳಿದ್ದೇನೆ? ಏನು ಮಾತನಾಡಬೇಕು ಎಂದು ಪರಿಜ್ಞಾನ ಅವರಿಗೆ ಇರಬೇಕು ಎಂದು ಅವರು ಹೇಳಿದರು.
ಸಂಸದ ರಮೇಶ ಜಿಗಜಿಣಗಿ ಅವರು ರೈತರ ಪರ, ದಲಿತರ ಪರ, ಮಹಿಳೆಯರ ಅನ್ಯಾಯದ ಬಗ್ಗೆ ನಿಂತು ಹೋರಾಟ ಮಾಡಿದ ಉದಾಹರಣೆ ಇಲ್ಲ. ನಿನ್ನೆ ಅವರು ಭಾಗವಹಿಸಿ ವಕ್ಫ್ ರದ್ದಾಗಬೇಕು ಎಂದು ಭಾಷಣ ಮಾಡಿದ್ದಾರೆ. 2024ರಲ್ಲಿ ಕೇಂದ್ರದ ಬಿಜೆಪಿ ಪ್ರಣಾಳಿಕೆಯಲ್ಲಿ ಏನಿತ್ತು? ಅವಲೋಕನ ಮಾಡಿಕೊಳ್ಳಿ. ವಕ್ಫ್ ಆಸ್ತಿಯನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡಿದ್ದರೆ ತೆರವು ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದಾರೆ. ತಮ್ಮ ಪ್ರಣಾಳಿಕೆಯನ್ನು ಅವಲೋಕಿಸಿ, ವಿಮರ್ಶೆ ಮಾಡಿಕೊಳ್ಳಬೇಕು. ನಾವ್ಯಾರು ರೈತರ, ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಬಾರದು ಎಂಬ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿದೆ ಎಂದು ಪ್ರೊ. ರಾಜು ಆಲಗೂರ ಹೇಳಿದರು.
ಈ ಸಂದರ್ಭದಲ್ಲಿ ಉಪಮೇಯರ್ ದಿನೇಶ ಹಳ್ಳಿ, ಕಾಂಗ್ರೆಸ್ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸನ್ನಿ ಎಸ್. ಗವಿಮಠ, ವಸಂತ ಹೊನಮೋಡೆ ಮುಂತಾದವರು ಉಪಸ್ಥಿತರಿದ್ದರು.