ಬಸವ ನಾಡಿಗೆ ವಂದೇ ಭಾರತ ರೈಲು ಕಾರ್ಯಸಾಧುವಲ್ಲ- ರೇಲ್ವೆ ಇಲಾಖೆ ಉತ್ತರಕ್ಕೆ ಶಾಸಕ ಸುನೀಲಗೌಡ ಪಾಟೀಲ ಆಕ್ರೋಶ

ವಿಜಯಪುರ: ವಿಜಯಪುರ-ಬಾಗಲಕೋಟೆ-ಬೆಂಗಳೂರು ಮತ್ತು ಮುಂಬಯಿ-ವಿಜಯಪುರ ಮಧ್ಯೆ ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವುದು ಕಾರ್ಯಸಾಧುವಲ್ಲ ಎಂದು ಕೇಂದ್ರ ರೇಲ್ವೆ ಇಲಾಖೆ ತಿಳಿಸಿದ್ದು, ಇದು ಕೇಂದ್ರ ಸರಕಾರ ಬಸವನಾಡಿನ ಬಗ್ಗೆ ಹೊಂದಿರುವ ಮಲತಾಯಿ ಧೋರಣಗೆ ಸಾಕ್ಷಿಯಾಗಿದೆ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ-ಬಾಗಲಕೋಟೆ-ಬೆಂಗಳೂರು ಮಧ್ಯೆ ಹೊಸದಾಗಿ ವಂದೇ ಭಾರತ ರೈಲು ಸೇವೆ ಪ್ರಾರಂಭಿಸಬೇಕು ಮತ್ತು ಮುಂಬಯಿ-ಸೋಲಾಪುರ ನಡುವೆ ಸಂಚರಿಸುವ ವಂದೇ ಭಾರತ ರೈಲನ್ನು ವಿಜಯಪುರವರೆಗೆ ವಿಸ್ತರಿಸುವಂತೆ ಆಗ್ರಹಿಸಿ 09.03.2024ರಂದು ಪ್ರಧಾನಿಗೆ ಪತ್ರ ಬರೆಯಲಾಗಿತ್ತು. ಈ ಹೊಸ ರೈಲು ಸೇವೆ ಪ್ರಾರಂಭಿಸಿ ಅಖಂಡ ವಿಜಯಪುರ ಜಿಲ್ಲೆಯ ಪ್ರಯಾಣಿಕರಿಗೆ ಹಾಗೂ ಈ ಭಾಗದ ಅಭಿವೃದ್ಧಿಗೆ ಸಹಕರಿಸುವಂತೆ ಪ್ರಧಾನಿಗೆ ಮನವಿ ಮಾಡಲಾಗಿತ್ತು. ಈ ಪತ್ರಕ್ಕೆ ಕೇಂದ್ರ ರೇಲ್ವೆ ಇಲಾಖೆಯಿಂದ ಉತ್ತರ ಬಂದಿದೆ. ಆದರೆ, ಈ ಮಾರ್ಗದಲ್ಲಿ ವಂದೇ ಭಾರತ ರೈಲು ಸಂಚಾರ ಕಾರ್ಯಸಾಧುವಲ್ಲ ಎಂಬುದನ್ನು ರೇಲ್ವೆ ಇಲಾಖೆಯವರು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಕೇಂದ್ರ ರೇಲ್ವೆ Fಇಲಾಖೆಯಿಂದ ಶಾಸಕ ಸುನೀಲಗೌಡ ಪಾಟೀಲ ಅವರಿಗೆ ಬಂದಿರುವ ಉತ್ತರ.
ವಂದೇ ಭಾರತ ರೈಲು ಸೇವೆ ಪ್ರಾರಂಭಿಸುವಂತೆ ಶಾಸಕ ಸುನೀಲಗೌಡ ಪಾಟೀಲ 09.03.2024 ರಂದು ಪ್ರಧಾನಿಗೆ ಬರೆದಿರುವ ಪತ್ರ.

 

ಸಧ್ಯಕ್ಕೆ ವಿಜಯಪುರ-ಬಾಗಲಕೋಟೆ-ಬೆಂಗಳೂರು ಮಧ್ಯೆ ಐದು ಮತ್ತು ಮುಂಬಯಿ-ವಿಜಯಪುರ ನಡುವೆ ಮೂರು ರೈಲುಗಳು ಸಂಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ರೈಲುಗಳನ್ನು ಪ್ರಾರಂಭಿಸುವುದು ಮತ್ತು ರೈಲು ಸೇವೆ ವಿಸ್ತರಣೆಗೆ ಮೂಲಸೌಲಭ್ಯ ಒದಗಿಸಲು ಹಾಗೂ ಕಾರ್ಯಾಚರಣೆ ನಡೆಸಲು ಈ ಸಂದರ್ಭದಲ್ಲಿ ಕಾರ್ಯಸಾಧುವಲ್ಲ. ಭಾರತೀಯ ರೇಲ್ವೆಯಲ್ಲಿ ಹೊಸ ರೈಲು ಸೇವೆ ಪ್ರಾರಂಭ ಮತ್ತು ಹಾಲಿ ಸೇವೆಯ ವಿಸ್ತರಣೆ ಪ್ರಕ್ರಿಯೆಗಳು ನಿರಂತರವಾಗಿರುತ್ತವೆ. ಅಲ್ಲದೇ, ಇವು ಸಧ್ಯಕ್ಕೆ ಲಭ್ಯವಿರುವ ಸಂಪನ್ಮೂಲಗಳ ಮೇಲೆ ಅವಲಂಬಿಸಿರುತ್ತವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರೇಲ್ವೆಯ ಈ ನಿರ್ಧಾರದಿಂದಾಗಿ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯ ಮೇಲೆ ತಣ್ಣೀರೆರಚಿದಂತಾಗಿ

ದೆ. ಅಲ್ಲದೇ, ಇದು ಉಭಯ ಜಿಲ್ಲೆಗಳ ಸಂಸದರಾದ ರಮೇಶ ಜಿಗಜಿಣಗಿ ಮತ್ತು ಪಿ. ಸಿ. ಗದ್ದಿಗೌಡರ ಅವರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ, ರೇಲ್ವೆ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೂ ಪ್ರಯೋಜನವಿಲ್ಲದಂತಾಗಿದೆ.

ಈಗಲಾದರೂ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಂಸದರು ಈ ನಿಟ್ಟಿನಲ್ಲಿ ರೇಲ್ವೆ ಸಚಿವರು ಮತ್ತು ಪ್ರಧಾನಿಗಳ ಮೇಲೆ ಒತ್ತಡ ತಂದು ಪುಣ್ಯ ಕಟ್ಟಿಕೊಳ್ಳಬೇಕು ಎಂದು ಸುನೀಲಗೌಡ ಪಾಟೀಲ ಮನವಿ ಮಾಡಿದ್ದಾರೆ.

Leave a Reply

ಹೊಸ ಪೋಸ್ಟ್‌