ವಿಜಯಪುರ: ಪತ್ರಿಕೋದ್ಯಮ ವೃತ್ತಿ ವೃತ್ತಿಯಾಗಿದ್ದು, ಪತ್ರಕರ್ತರಾದವರು ಸಮಾಜಮುಖಿ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಗೋಪಾಲ ನಾಯಕ ಹೇಳಿದ್ದಾರೆ.
ನಗರದ ಜಿ. ಪಂ. ಬಳಿ ಇರುವ ಪತ್ರಿಕಾ ಭವನದಲ್ಲಿ ಶುಕ್ರವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಧಕ ಪತ್ರಕರ್ತರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪತ್ರಿಕೋದ್ಯಮ ಪವಿತ್ರ ವೃತ್ತಿಯಾಗಿದೆ. ಇಂಥ ಮಹತ್ವದ ಪತ್ರಿಕಾಧರ್ಮ ನಿಭಾಯಿಸುವ ಪತ್ರಕರ್ತರಲ್ಲಿ ಕೆಟ್ಟ ವಿಚಾರಗಳು, ಸಮಾಜಕ್ಕೆ ಧಕ್ಕೆ ತರುವ ಭಾವನೆಗಳು ಇರಬಾರದು. ಉತ್ತಮ ಕೆಲಸ ಮಾಡಿ ಪತ್ರಿಕಾಧರ್ಮ ಎತ್ತಿ ಹಿಡಿಯಬೇಕು. ಪತ್ರಕರ್ತರಾದವರು ಸಮಾಜದ ಸ್ವಾಸ್ಥ್ಯ ಕಾಪಾಡಿ ಪತ್ರಿಕೋದ್ಯಮದ ಮಹತ್ವ ಎತ್ತಿ ಹಿಡಿಯುವಂತಿರಬೇಕು. ಜನರಿಗೆ ನ್ಯಾಯ ಒದಗಿಸಬೇಕು. ಇಂದಿನ ಪತ್ರಕರ್ತರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು. ಸಾಧಕ ಪತ್ರಕರ್ತರನ್ನು ಕರೆದು ಸನ್ಮಾನಿಸುವ ಸಂಪ್ರದಾಯ ಶ್ಲಾಘನೀಯ ಕಾರ್ಯವಾಗಿದ್ದು ಸಂಘವು ಇದನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ಪತ್ರಕರ್ತರಾದವರು ಸಮಾಜದ ಸ್ವಾಸ್ಥ್ಯ ಕಾಪಾಡಿ ಪತ್ರಿಕೋದ್ಯಮದ ಮಹತ್ವ ಎತ್ತಿ ಹಿಡಿಯುವಂತಿರಬೇಕು. ಜನರಿಗೆ ನ್ಯಾಯ ಒದಗಿಸಬೇಕು. ಇಂದಿನ ಪತ್ರಕರ್ತರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು. ಸಾಧಕ ಪತ್ರಕರ್ತರನ್ನು ಕರೆದು ಸನ್ಮಾನಿಸುವ ಸಂಪ್ರದಾಯ ಶ್ಲಾಘನೀಯ ಕಾರ್ಯವಾಗಿದ್ದು ಸಂಘವು ಇದನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ಇವತ್ತು ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಿರ್ಮಾಣಗೊಳ್ಳಲು ಮೂಲ ಕಾರಣ ಹಿರಿಯ ಪತ್ರಕರ್ತರಾದ ರಫೀ ಭಂಡಾರಿ ಕಾರಣ. ವಿವಿಗೆ ಜಾಗ ಕೊಡಿಸಲು ರಫೀ ಅವರು ಪತ್ರಕರ್ತರಾಗಿ ಬಹಳಷ್ಟು ಹೋರಾಟ ಮಾಡಿದ್ದರು. ಇದನ್ನು ನಾವು ನೆನಪಿಸಿಕೊಳ್ಳಬೇಕು ಎಂದು ಗೋಪಾಲ ನಾಯಕ ಹೇಳಿದರು.
ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ ಮಾತನಾಡಿ ಪತ್ರಕರ್ತರ ಸಂಘದವರು ಒಂದೇ ಕುಟುಂಬದ ಸದಸ್ಯರಂತಿರಬೇಕು. ಪತ್ರಕರ್ತರಾದವರಲ್ಲಿ ಅಸಹನೆ, ಹೊಟ್ಟಕಿಚ್ಚು, ಅಸೂಯೆ, ದ್ವೇಷ ಇರಬಾರದು. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಸಾಧನೆ ಮಾಡಿದ ಹಲವರನ್ನು ಗೌರವಿಸುವ ಸಂಪ್ರದಾಯ ವಿಶಿಷ್ಟವಾದದ್ದಾಗಿದ್ದು ಇದು ಮುಂದುವರೆಯಬೇಕು ಎಂದು ಹೇಳಿದರು.
ವಿಜಯವಾಣಿ ದಿನಪತ್ರಿಕೆಯ ಸ್ಥಾನಿಕ ಸಂಪಾದಕ ಮತ್ತು ಸಂಘದ ಸಲಹಾ ಸಮಿತಿ ಸದಸ್ಯರಾದ ಕೆ. ಎನ್. ರಮೇಶ ಮಾತನಾಡಿ ಸಂಘದಲ್ಲಿ ಒಗ್ಗಟ್ಟು ಇರಬೇಕು. ಇದರಿಂದ ಸಂಘದ ಬೆಳವಣಿಗೆ ಆಗುತ್ತದೆ ಮಾತ್ರವಲ್ಲದೆ ಎಲ್ಲರಲ್ಲೂ ಸೌಹಾರ್ದತೆ ಮೂಡುತ್ತದೆ. ಸಂಘದಿಂದ ಸಹೊದ್ಯೋಗಿಗಳನ್ನು ಸನ್ಮಾನಿಸುವುದು ಉತ್ತಮ ಸಂಪ್ರದಾಯ. ಪತ್ರಕರ್ತರ ಕುಟುಂಬ ಒಂದೆಡೆ ಸೇರಿಸುವ ಕಾರ್ಯವನ್ನು ಸಂಘವು ಮಾಡಬೇಕು. ನಮ್ಮ ಶ್ರೇಯೋಭಿವೃದ್ದಿಯ ಜೊತೆಗೆ ನಮ್ಮ ಚಟುವಟಿಕೆಗಳ ಪರಿಚಯವನ್ನೂ ಮಾಡಿಕೊಡಬೇಕು. ಪತ್ರಕರ್ತರ ಕುಟುಂಬದವರಿಗೂ ತಮ್ಮವರು ಮಾಡುವ ಕೆಲಸ ಕಾರ್ಯಗಳ ಪರಿಚಯವಾದಂತಾಗುತ್ತದೆ ಎಂದು ಹೇಳಿದರು.
ಸಂಘದ ಅಧ್ಯಕ್ಷ ಸಂಗಮೇಶ ಟಿ. ಚೂರಿ ಮಾತನಾಡಿ, ಹಿರಿಯರ ಸಲಹೆ, ಮಾರ್ಗದರ್ಶನದಂತೆ ಸಂಘವನ್ನು ಮುನ್ನಡೆಸುತ್ತೇನೆ. ಸಭೆಗೆ, ಸಂಘದ ಚಟುವಟಿಕೆಗಳಿಗೆ ಕರೆದಾಗ ಎಲ್ಲ ಸದಸ್ಯರು ಬಂದು ಯಶಸ್ವಿ ಮಾಡಬೇಕು. ಸಂಘದ ವಿಷಯ ಬಂದಾಗ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಸಮಯಪಾಲನೆ ನಮ್ಮೆಲ್ಲರಲ್ಲೂ ಇರಬೇಕು ಎಂದು ಹೇಳಿದರು.
ಬೆಳಗಾವಿ ರಾಣಿ ಚನ್ನಮ್ಮ ವಿವಿ ಸಿಂಡಿಕೇಟ್ ಸದಸ್ಯ ರಫಿ ಭಂಡಾರಿ ಮಾತನಾಡಿ, ಇಂದಿನ ಪತ್ರಕರ್ತರಲ್ಲಿ ಸ್ಪಷ್ಟತೆ, ನಿರ್ದಿಷ್ಟತೆ ಕಡಿಮೆಯಾಗುತ್ತಿರುವುದು ವಿಷಾಧ ಪಡುವಂಥದ್ದು. ನಮ್ಮಲ್ಲಿ ಸ್ಪಷ್ಟತೆ ಇರಬೇಕು. ನಮಗೆ ಕೆಟ್ಟದ್ದು ಮಾಡಿದವರಿಗೂ ಒಳ್ಳೇಯದನ್ನು ಬಯಸಬೇಕು. ಅದು ನಮ್ಮನ್ನು ಕಾಪಾಡುತ್ತದೆ. ಮಹಿಳಾ ವಿವಿಯಲ್ಲಿ ಪತ್ರಿಕೋದ್ಯಮ ವಿಭಾಗ ಹೆಸರಿಗೆ ಮಾತ್ರ ಇದೆ. ಅದರ ಬೆಳವಣಿಗೆಗೆ ಪತ್ರಕರ್ತರು ಪ್ರಯತ್ನಿಸಬೇಕು. ಹೆಚ್ಚು ವಿದ್ಯಾರ್ಥಿಗಳು ಬರುವಂತಾಗಬೇಕು. ಅವಕಾಶ ಸಿಕ್ಕಾಗಲೆಲ್ಲ ಸಂಘದಿಂದ ಪ್ರಚಾರ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಗೆ ಸದಸ್ಯರಾಗಿ ನೇಮಕವಾಗಿರುವ ಸಂಘದ ಅಧ್ಯಕ್ಷ ಸಂಗಮೇಶ ಟಿ. ಚೂರಿ, ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ರುದ್ರಪ್ಪ ಆಸಂಗಿ, ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯ ಸಿಂಡಿಕೇಟ್ ಸದಸ್ಯರಾಗಿ ನೇಮಕರಾದ ಸಂಘದ ಮಾಜಿ ಅಧ್ಯಕ್ಷ ರಫಿ ಭಂಡಾರಿ, ಕರ್ನಾಟಕ ಸಂಪಾದಕರ ಸಂಘದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮಹ್ಮದಇರ್ಫಾನ್ ಶೇಖ್, ವಿಜಯಪುರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಪುರಸ್ಕೃತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಉಳ್ಳಾಗಡ್ಡಿ, ಟಿವಿ9 ಕ್ಯಾಮರಾಮನ್ ಶ್ರೀಶೈಲ ಕೊಟ್ಟಲಗಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇವರೆಲ್ಲರಿಗೂ ಐಎಫ್ ಡಬ್ಲುಜೆ ರಾಷ್ಟ್ರೀಯ ಮಂಡಳಿ ಸದಸ್ಯ ಮಹೇಶ ಶಟಗಾರ ಅವರು ವೈಯುಕ್ತಿಕವಾಗಿ ಸನ್ಮಾನಿಸಿ ಅಭಿನಂದಿಸಿದರು.
ಸನ್ಮಾನಿತರ ಪರವಾಗಿ ರುದ್ರಪ್ಪ ಆಸಂಗಿ, ಉಳ್ಳಾಗಡ್ಡಿ, ಮೋಹನ ಕುಲಕರ್ಣಿ, ಇರ್ಫಾನ್ ಶೇಖ್ ಅವರು ಮಾತನಾಡಿ ತಮ್ಮ ಸಾಧನೆಯನ್ನು ಗುರುತಿಸಿ ಸನ್ಮಾನಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಿ. ಬಿ. ವಡವಡಗಿ, ಜಿಲ್ಲಾ ಉಪಾಧ್ಯಕ್ಷರಾದ ಪ್ರಕಾಶ ಬೆಣ್ಣೂರ, ಫಿರೋಜ್ ರೋಜಿಂದಾರ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮಹ್ಮದಸಮೀರ ಇನಾಮದಾರ, ಸುನೀಲ ಗೊಡೆನವರ, ಗುರಪ್ಪ ಲೋಕೂರಿ, ನಾಮನಿರ್ದೇಶಿತ ಸಹ ಖಜಾಂಚಿ ದೀಪಕ ಸಿಂತ್ರೆ, ನಾಮನಿರ್ದೇಶಿತ ಸದಸ್ಯ ಅಶೋಕ ಯಡಹಳ್ಳಿ, ಸಲಹಾ ಸಮಿತಿ ಸದಸ್ಯ ಸೀತಾರಾಮ ಕುಲಕರ್ಣಿ, ಸಂಘದ ಮಾಜಿ ಅಧ್ಯಕ್ಷ ರಾಜು ಕೊಂಡಗೂಳಿ, ಸಚ್ಚೇಂದ್ರ ಲಂಬು, ಶರಣು ಮಸಳಿ, ಮಾಜಿ ಪ್ರಧಾನ ಕಾರ್ಯದರ್ಶಿ ನಿಂಗಪ್ಪ ನಾವಿ, ಪತ್ರಕರ್ತರಾದ ಎಸ್. ಬಿ. ಪಾಟೀಲ, ಸಂಘದ ಸದಸ್ಯರು ಉಪಸ್ಥಿತರಿದ್ದರು.