ಮೈ ನವಿರೇಳಿಸುವ ಮಲೆನಾಡ ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಓಡಿ ಗಮನ ಸೆಳೆದ ಬಸವನಾಡಿನ ಓಟಗಾರರು

ವಿಜಯಪುರ: ಜಿಲ್ಲೆಯ ಕ್ರಿಯಾಶೀಲ ನಾಲ್ಕು ಜನ ಯುವಕರು ಕಠಿಣವಾದ ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೊಂಡು ಓಟವನ್ನು ಪೂರ್ಣಗೊಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಶನಿವಾರ ಚಿಕ್ಕಮಗಳೂರಿನಲ್ಲಿ ನಡೆದ ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೊಂಡ ವಿಜಯಪುರದ ರಘು ಸಾಲೋಟಗಿ ಮತ್ತು ಸಂದೀಪ ಮಡಗೊಂಡ 50 ಕಿ. ಮೀ. ಓಟ ಪೂರ್ಣಗೊಳಿಸಿದರೆ, ವೃಕ್ಷಥಾನ ಹೆರಿಟೇಜ್ ರನ್- 2024 ನೋಂದಣಿ ಸಮಿತಿ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಯಲಗೊಂಡ ಮತ್ತು ಶ್ರೀನಿವಾಸ ಸೊನ್ನದ 30 ಕಿ. ಮೀ. ಓಟ ಪೂರ್ಣಗೊಳಿಸಿ ಗಮನ ಸೆಳೆದಿದ್ದಾರೆ. ಈ ಸಾಧಕರಿಗೆ ವೃಕ್ಷಥಾನ ಹೆರಿಟೇಜ್ ರನ್ ಸಮಿತಿಯ ಎಲ್ಲ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಈ ನಾಲ್ಕೂ ಜನ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಓಟವನ್ನು ಪೂರ್ಣಗೊಳಿಸುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ಇಂಥ ಓಟಗಳಲ್ಲಿಯೇ ಕಠಿಣವಾದುದು ಎಂದೇ ಖ್ಯಾತಿ ಪಡೆದಿದೆ. ದಟ್ಟ ಕಾಡು, ಕಾಫಿ ಎಸ್ಟೇಟ್, ಗುಡ್ಡಗಾಡು, ಕಿರಿದಾದ ರಸ್ತೆ, ಸ್ವಲ್ಪ ಆಯ ತಪ್ಪಿದರೂ ಆಳವಾದ ಕಂದಕಕ್ಕೆ ಬೀಳುವ ಆತಂಕ, ಕಾಡು ಪ್ರಾಣಿಗಳ ಭಯ, ಕೆಸರು ಪ್ರದೇಶ, ಹಳ್ಳಗಳನ್ನು ದಾಟಿ ಮುಂದೆ ಸಾಗುವುದು, ನೇರವಾದ ಗುಡ್ಡವನ್ನು ಹತ್ತುವಂಥ ಕಠಿಣ ಪರಿಸ್ಥಿತಿಯಲ್ಲಿ ಓಟಗಾರರು ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಸಾಬೀತು ಪಡಿಸಿ ಈ ಓಟ ಪೂರ್ಣಗೊಳಿಸಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಹೃದಯ ಬಡಿತವೂ ಹೆಚ್ಚಾಗುತ್ತದೆ. ಇದಕ್ಕಾಗಿ ಈ ಓಟಗಾರರು ಸಾಕಷ್ಟು ಪೂರ್ವ ತಯಾರಿಸಿ ನಡೆಸಿ, ತಜ್ಞ ಓಟಗಾರರಿಂದ ಸಂಪೂರ್ಣ ಮಾಹಿತಿ ಪಡೆದು ಪಾಲ್ಗೋಳ್ಳಬೇಕಾಗುತ್ತದೆ.

ಇಂಥ ಕಠಿಣ ಓಟದಲ್ಲಿ ಪಾಲ್ಗೊಂಡು ಪೂರ್ಣಗೊಳಿಸಿರುವ ಕುರಿತು ಪ್ರತಿಕ್ರಿಯೆ ನೀಡಿರುವ ರಘು ಸಾಲೋಟಗಿ ನಾನು ಸಾಫ್ಟವೇರ್ ಎಂಜಿನಿಯರ್ ಆಗಿದ್ದೇನೆ. ನಾನು 50 ಕಿ. ಮೀ. ಓಟದಲ್ಲಿ ಓಡಿದ ಮೂರನೇ ಇವೆಂಟ್ ಇದಾಗಿದೆ. 21 ಕಿ. ಮೀ. ಹಾಫ್ ಮ್ಯಾರಾಥಾನ್ ಗಳಲ್ಲಿ 40 ಬಾರಿ ಪಾಲ್ಗೋಂಡಿದ್ದೇನೆ. ಅಲ್ಲದೇ, 10 ಕಿ. ಮೀ. ಓಟದಲ್ಲಿ 100ಕ್ಕೂ ಹೆಚ್ಚು ಬಾರಿ ಪಾಲ್ಗೋಂಡಿದ್ದೇನೆ. ಈ ಬಾರಿಯ ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ 3 ಸಲ ಪಾಲ್ಗೋಂಡಿದ್ದೇನೆ. ಪ್ರಕೃತಿ ಸೌಂದರ್ಯದ ಮಧ್ಯೆ ಓಡುವುದು ಅತ್ಯದ್ಭುತ ಅನುಭವ ನೀಡುತ್ತದೆ. ಈ ಸಂದರ್ಭದಲ್ಲಿ ಸುಮಾರು 1.80 ಕಿ. ಮೀ. ಎತ್ತರದಲ್ಲಿರುವ ಗುಡ್ಡವನ್ನು ಹತ್ತಿ ಇಳಿಯಬೇಕಾಗುತ್ತದೆ. ಹಳ್ಳಗಳಲ್ಲಿ ಶೂಗಳನ್ನು ಬಿಚ್ಚಿ ನೀರು ದಾಟಬೇಕಾಗುತ್ತುದೆ. ದಾರಿಯಲ್ಲಿ ಬರುವ ಎಲ್ಲ ಸವಾಲುಗಳನ್ನು ಮೀರಿ ಓಟ ಪೂರ್ಣಗೊಳಿಸಿರುವುದು ಸಂತಸವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ವಿಜಯಪುರ ನಗರದ ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುವ ಸಂದೀಪ ಮಡಗೊಂಡ ಮಾತನಾಡಿ, ಇದು ನಾನು ಪಾಲ್ಗೊಂಡ ಮೊದಲ 50 ಕಿ. ಮೀ. ಓಟವಾಗಿತ್ತು. ಇದಕ್ಕೂ ಮುಂಚೆ 30 ಕಿ. ಮಿ. ನಲ್ಲಿ ಒಂದು ಸಲ ಮತ್ತು 21 ಕಿ. ಮೀ. ಓಟದಲ್ಲಿ 11 ಬಾರಿ ಪಾಲ್ಗೋಂಡಿದ್ದೇನೆ. ಆದರೆ, ಈ ಬಾರಿಯ ಓಟ ರೋಮಾಂಚಕವಾಗಿತ್ತು. ಈ ಓಟದಲ್ಲಿ ಶೇಕಡ 50 ಭಾಗ ಓಡಬೇಕಾದರೆ, ಮತ್ತೆ ಶೇ. 50 ಭಾಗ ನಡೆದುಕೊಂಡು ಸಾಗಬೇಕಾಗುತ್ತದೆ. ದಾರಿಯಲ್ಲಿ ಹೃದಯ ಬಡಿತದ ಬಗ್ಗೆ ಗಮನವಿಡಬೇಕಾಗುತ್ತದೆ. ಸ್ಮಾರ್ಟ್ ವಾಚ್ ಕಡ್ಡಾಯವಾಗಿ ಧರಿಸಲೇಬೇಕು. ಜೊತೆಗೆ ಹೆಗಲಿಗೊಂದು ಬ್ಯಾಗು ಹಾಕಿಕೊಂಡು ನೀರು ಮತ್ತು ಸಕ್ಕರೆಯುಕ್ತ ಪಾನೀಯಗಳನ್ನು ಇಟ್ಟುಕೊಂಡು ಓಡಬೇಕಾಗುತ್ತದೆ. ನಾವು ಓಡುವಾಗ ಹೃದಯ ಬಡಿತ ಕೆಲವು ಬಾರಿ 180ರ ವರೆಗೆ ಇರುತ್ತದೆ. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾಗುವ ಓಟವನ್ನು ಸಂಜೆ 5 ಗಂಟೆಯೊಳಗೆ ಪೂರ್ಣವಾಗಬೇಕು. ಆದರೆ, ನಾನು ನಿಗದಿತ ಅವಧಿಗೂ ಮುಂಚೆಯೇ ಪೂರ್ಣಗೊಳಿಸಿರುವುದು ಖುಷಿ ನೀಡಿದೆ ಎಂದು ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವೈತ್ತಿಯಲ್ಲಿ ಆಯುರ್ವೇದ ವೈದ್ಯ ಮತ್ತು ವ್ರಕ್ಷಥಾನ ಹೆರಿಟೇಜ್ ರನ್ ನೋಂದಣಿ ಸಮಿತಿ ಮುಖ್ಯಸ್ಥ ಡಾ. ಮಲ್ಲಿಕಾರ್ಜುನ ಯಲಗೊಂಡ ಮಾತನಾಡಿ, ನಾನು ಈಗಾಗಲೇ 21 ಕಿ. ಮೀ. 5 ಓಟಗಳ್ಲಲಿ ಪಾಲ್ಗೊಂಡಿದ್ದೇನೆ. 10 ಕಿ. ಮೀ. ಓಟದಲ್ಲಿ ಆರು ಬಾರಿ ಮತ್ತು ಇದೇ ಮೊದಲ ಬಾರಿ ಅಲ್ಟ್ರಾ ರನ್ ನಲ್ಲಿ ಪಾಲ್ಗೋಂಡಿದ್ದೇನೆ. ಮೂರ್ನಾಲ್ಕು ಗುಡ್ಡಗಳನ್ನು ಹತ್ತಿ ಇಳಿಯುವುದು, ದುರ್ಗಮ ಪ್ರದೇಶದಲ್ಲಿ ಆಯ ತಪ್ಪಿದರೂ ಕಂದಕಕ್ಕೆ ಬೀಳುವ ಅಪಾಯದ ನಡುವೆ ಕಿರಿದಾದ ಕಿರುಹಾದಿಯಲ್ಲಿ ಓಡಿದ್ದು ರೋಮಾಂಚನ ನೀಡಿದೆ. ಈ ಓಟಕ್ಕಾಗಿ ನಾನು ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡಿದ್ದೆ. ನಿರಂತರ ಪ್ರ್ಯಾಕ್ಟೀಸ್ ಮಾಡುವುದರಿಂದ ಇದು ಸಾಧ್ವಯಾಗಿದೆ. ನುರಿತ ಓಟಗಾರರಿಂದ ಮಾಹಿತಿ ಪಡೆದಿದ್ದು ಮತ್ತು ಈ ಹಿಂದಿನ ಎಲ್ಲ ಓಟಗಳ ಅನುಭವ ಇಲ್ಲಿ 30 ಕಿ. ಮೀ. ಓಟ ಪೂರ್ಣಗೊಳಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಶ್ರೀನಿವಾಸ್ ಸೊನ್ನದ ಮಾತನಾಡಿ, 30 ಕಿ. ಮೀ. ಮಲೆನಾಡು ಅಲ್ಟ್ರಾ ಮ್ಯಾರಾಥಾನ್ ನಲ್ಲಿ ಪಾಲ್ಗೋಂಡಿದ್ದು ಎಂದೂ ಮರೆಯದ ಘಳಿಗೆಯಾಗಿದೆ. ಹಚ್ಚ ಹಸಿರಿನ ಪರಿಸರದ ಮಧ್ಯೆ ಹೆಜ್ಜೆ ಹಾಕುತ್ತ ಓಡುವುದು ಇದೇ ಮೊದಲ ಬಾರಿ. ಈ ಮುಂಚೆ ನಾನು ನಾಲ್ಕು ಬಾರಿ 21 ಕಿ. ಮೀ. ಓಟದಲ್ಲಿ ಪಾಲ್ಗೋಂಡಿದ್ದೇನೆ. ಆದರೆ, ಈ ಸಲದ ಓಟ ಎಂದೂ ಮರೆಯಲು ಸಾಧ್ಯವಿಲ್ಲ. ವಿಜಯಪುರ ವೃಕ್ಷೊಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೋಳ್ಳು ಚಾತಕ ಪಕ್ಷಿಯಂತೆ ಕಾಯುತ್ತಿರುವೆ ಎಂದು ತಿಳಿಸಿದರು.

Leave a Reply

ಹೊಸ ಪೋಸ್ಟ್‌