ವಿಜಯಪುರ: ಮನೆಯ ಕಸದಂತೆ ಮನಸ್ಸಿನ ಆಲಸ್ಯವನ್ನು ಹೊರ ಹಾಕಬೇಕು ಎಂದು ಖ್ಯಾತ ವಾಗ್ಮಿ, ಶಿಕ್ಷಣ ತಜ್ಞ, ಲೋಕ ಶಿಕ್ಷಣ ಟ್ರಸ್ಟ್ ಧರ್ಮದರ್ಶಿ ಡಾ. ಗುರುರಾಜ ಕರಜಗಿ ಹೇಳಿದ್ದಾರೆ.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಬಿದರಿ ಚೈಲ್ಡ್ ಅಕಾಡೆಮಿ ವತಿಯಿಂದ ಪಾಲಕರಿಗಾಗಿ ಶುಕ್ರವಾರ ಆಯೋಜಿಸಲಾಗಿದ್ದ ಮಾರ್ಗದರ್ಶನ ಗೋಷ್ಠಿಯಲ್ಲಿ ಅವರು ಉಪನ್ಯಾಸ ನೀಡಿದರು.
ಅನೇಕ ಕಥೆ, ಕುತೂಹಲಕಾರಿ ಅಂಶಗಳ ಮೂಲಕ ಉದಾಹರಣೆ ನೀಡಿದ ಅವರು, ಬದುಕು ಸುಂದರವಾಗಬೇಕಾದರೆ ಮಕ್ಕಳನ್ನು ಯಾವ ರೀತಿ ಬೆಳೆಸಬೇಕು ಎಂಬ ಸೂತ್ರಗಳನ್ನು ವಿವರಿಸಿದರು. ಇದು ನಮ್ಮ ಸ್ವಂತ ಜೀವನ. ಸ್ವಂತ ಮನೆಗೆ ಮೊಳೆ ಸಹ ಹೊಡೆಯುವುದಿಲ್ಲ. ಸ್ವಂತ ಮನೆಯಲ್ಲಿ ಕಸ ಇರಿಸುವುದಿಲ್ಲ. ಮನೆ ಸುಂದರವಾಗಿ ಕಾಣಲು ಅಂದವಾದ ಬಣ್ಣ ಬಳಿಯುತ್ತೇವೆ. ಆದರೆ, ಇದೇ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದಿಲ್ಲ. ಹೀಗಾಗಿ ನಮ್ಮ ಸ್ವಂತ ಜೀವನವನ್ನು ಸ್ವಚ್ಚ, ಪರಿಶುದ್ಧವಾಗಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಸಮಯ ಅಮೂಲ್ಯ. ಕಳೆದು ಹೋದ ಹಣ ಮರಳಿ ಬರಬಹುದು. ಆದರೆ, ಸಮಯ ಯಾವತ್ತೂ ಮರಳಿ ಬರುವುದಿಲ್ಲ. ಅವಕಾಶ ಬಂದಾಗ ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮೌಲ್ಯಗಳನ್ನು ಹೇಳಿ ಕಲಿಸಲು ಸಾಧ್ಯವಿಲ್ಲ. ನಮ್ಮ ನಡೆಯೇ ಮೌಲ್ಯಗಳನ್ನು ನಿರೂಪಿಸುತ್ತದೆ. ಇದನ್ನು ಪಾಲಕರು ಗಮನಿಸಬೇಕು ಎಂದು ಅವರುಹೇಳಿದರು.
ಪಾಲಕರು ತಮ್ಮ ಮಕ್ಕಳನ್ನು ಈ ರೀತಿ ಸಾಧನೆ ಮಾಡು ಎಂದು ಹೇಳುವ ಬದಲು ಸ್ವತಃ ಸಾಧನೆ ಮಾಡಿದರೆ ಮಕ್ಕಳು ನಿಮ್ಮನ್ನು ಅನುಸರಿಸುತ್ತಾರೆ. ಚಂದ್ರನ ಮೇಲೆ ಹೋಗು ಎಂದು ಹೇಳುವ ಬದಲು ನೀವೇ ಮೊದಲು ಚಂದ್ರನ ಬಳಿಗೆ ಹೋಗಿ ನಿಮ್ಮ ಮಗುವನ್ನು ಚಂದ್ರನಲ್ಲಿಗೆ ಆಹ್ವಾನಿಸಿ ಎಂಬ ಮಾತಿದೆ ಎಂದು ಅವರು ಹೇಳಿದರು.
ಸಿರಿಯಲ್ ತ್ಯಾಗ ಮಾಡಿ
ನಮ್ಮ ಮಗ ಬಹಳ ಟಿವಿ ನೋಡುತ್ತಾನೆ ಎಂದು ಅನೇಕರು ಹೇಳುತ್ತಾರೆ. ಅದನ್ನು ಕಲಿಸಿದವರು ಯಾರು? ಮಕ್ಕಳಿಗಾಗಿ ಪಾಲಕರು ತ್ಯಾಗ ಮಾಡುತ್ತಾರೆ. ಈಗ ಪಾಲಕರು ಮೊದಲು ಸಿರಿಯಲ್ ತ್ಯಾಗ ಮಾಡಬೇಕಿದೆ. ನಿನ್ನ ಪಾಡಿಗೆ ನೀನು ಬಾಗಿಲು ಹಾಕಿ ಓದು. ನಾನು ಸಿರಿಯಲ್ ನೋಡಬೇಕು ಎಂದು ಪಾಲಕರು ಹೇಳುವಾಗ ಮಗು ಹೇಗೆ ಓದಲು ಸಾಧ್ಯ? ಕುಟುಂಬಕ್ಕೆ ಸಮಯ ಎನ್ನುವುದು ಪರಿಪಕ್ವವಾಗಿಡಬೇಕು. ಒಟ್ಟಿಗೆ ಕುಳಿತು ಊಟ ಮಾಡಬೇಕು. ಒಟ್ಟಿಗೆ ಕುಳಿತು ಕ್ರೈಂ ಸ್ಟೋರಿ ನೋಡುವ ಬದಲು ಪ್ರಾರ್ಥನೆ ಮಾಡಬೇಕು. ಎಲ್ಲೆಡೆ ಕಸವಿದೆ. ಜೊತೆಗೆ ಅಂದವೂ ಇದೆ. ನಮ್ಮ ಬದುಕು ಜೇನಿನಂತೆ ಇರಬೇಕು. ಜೇನು ಹೂವಿನ ಬಳಿಯೇ ಹೋಗುತ್ತದೆ ಹೊರತು ಕೊಳಕಿನ ಬಳಿ ಹೋಗುವುದಿಲ್ಲ. ಆದರೆ, ನೊಣ ಹೂವಿನ ಬಳಿ ಹೋಗುವುದಿಲ್ಲ. ಬರೀ ಕೊಳಕಿನ ಬಳಿ ಹೋಗುತ್ತದೆ. ಹೀಗಾಗಿ ನಾವು ಜೇನಿನಂತೆ ಸೌಂದರ್ಯದ ಬಳಿ ಹೋಗಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಕಲಿಸಿದರೆ ಅರ್ಥವಾಗದ ವಿಷಯಗಳೂ ಸಹ ಅರ್ಥವಾಗುತ್ತವೆ. ಕೌಶಲ್ಯ ಮತ್ತು ಜ್ಞಾನ ಶಿಕ್ಷಕರಿಗೆ ಅತ್ಯಂತ ಮಹತ್ವ ಎಂದು ಅವರು ಗುರುಳಿಗೆ ಕಿವಿಮಾತು ಹೇಳಿದರು.
ನಿದ್ರಾಹೀನತೆ ಬಹುದೊಡ್ಡ ಸಮಸ್ಯೆ
ಖ್ಯಾತ ವೈದ್ಯ ಡಾ.ರವಿಕುಮಾರ್ ಮಾತನಾಡಿ, ನಿದ್ದೆ ಅತ್ಯಂತ ಮುಖ್ಯ. ಮೊಬೈಲ್ ಮಕ್ಕಳಿಗೆ ನಿದ್ರಾಹೀನತೆಗೆ ಕಾರಣವಾಗುತ್ತಿದೆ. ಈ ಹಿಂದೆ ಮಕ್ಕಳಲ್ಲಿ ಸಮಸ್ಯೆಯೇ ಇರಲಿಲ್ಲ. ಆದರೆ, ಇಂದು ಇದೇ ಪ್ರಧಾನವಾಗಿದೆ. ರಾತ್ರಿ ಸಮಯದಲ್ಲಿ ಮೊಬೈಲ್ ಬಳಕೆ ನಮ್ಮ ನಿದ್ದೆ ದೂರ ಮಾಡುತ್ತದೆ. ನಾನು ಒಂದು ಪೋಸ್ಟ್ ಹಾಕಿದರೆ ಅದಕ್ಕೆ ಲೈಕ್ ಬರಬೇಕು. ಅವರು ಲೈಕ್ ಮಾಡಿದ್ದಾರೆ, ಅವರು ಲೈಕ್ ಮಾಡಿಲ್ಲ ಎನ್ನುವ ಕೊರಗು ಸಹ ಈಗಿನ ಪೀಳಿಗೆಯಲ್ಲಿ ಒಂದು ಗೀಳಾಗಿ ಕಾಡುತ್ತಿದೆ ಎಂದು ಅವರು ಹೇಳಿದರು.
ಡಾ.ಗೌರಿ ಮತ್ತು ಡಾ.ಅಪೂರ್ವ ಮಕ್ಕಳ ಕುರಿತು ಮಹತ್ವದ ವಿಷಯಗಳ ಕುರಿತು ಮಾತನಾಡಿದರು
ಡಾ. ಬಿದರಿ ಚೈಲ್ಡ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಡಾ. ಎಲ್. ಎಚ್. ಬಿದರಿ, ಚೈಲ್ಡ್ ಅಕಾಡೆಮಿಯ ಸದಸ್ಯೆ ಶೋಭಾ ಬಿದರಿ, ಪ್ರೊ. ರಾಜು ಬಿದರಿ, ಪ್ರಕಾಶ ಮಠ, ದೀಪಾ ತಟ್ಟಿಮನಿ, ಮೋಹನ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.
ಪ್ರಶಸ್ತಿ ಪ್ರಧಾನ ಸಮಾರಂಭ
ಸಂಜೆ ನಡೆದ ಕಾರ್ಯಕ್ರಮದಲ್ಲಿ ನವೆಂಬರ್ ತಿಂಗಳಲ್ಲಿ ನಡೆದ ಚಿತ್ರಕಲೆ, ಪ್ರಬಂದ, ಚೆಸ್, ರನ್ನಿಂಗ್, ಲಾಂಗ್ ಜಂಪ್, ಶಾಟ್ ಪುಟ್, ಭರತನಾಟ್ಯ, ಜಾನಪದ ನೃತ್ಯ ಸ್ಪರ್ಧೆಗಳು ಹಾಗೂ ಸಾಹಸ ಕ್ರೀಡೆಗಳ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ, ಕೌಶಲ್ಯಗಳನ್ನು ಪ್ರದರ್ಶಿಸಿ ವಿಜೇತ ಹಾಗೂ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಅದೇ ದಿನ ಸಂಜೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇಂದಿನ ಮಕ್ಕಳಿಗೆ ಮಾನಸಿಕ ಶಿಕ್ಷಣದ ಜೊತೆಗೆ ಶಾರೀರಿಕ ಶಿಕ್ಷಣ ಅತೀ ಅವಶ್ಯವಿದೆ. ಮಕ್ಕಳಲ್ಲಿ ಬರೀ ಶಿಕ್ಷಣಕ್ಕೆ ಒತ್ತು ಕೊಡದೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಶಾರೀರಿಕ ಆಟಗಳ ತರಬೇತಿ ಕೂಡ ಅಗತ್ಯವಿದೆ ಎಂದು ಹೇಳಿದರು.
ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ಮಕ್ಕಳ ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಡಾ. ಎಲ್. ಎಚ್. ಬಿದರಿ ಅವರು ಸಾಮಾಜಿಕ ಕ್ಷೇತ್ರದಲ್ಲೂ ನೀಡುತ್ತಿರುವ ಸೇವೆ ಶ್ಲಾಘನೀಯ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಮಾತನಾಡಿ, ಚೈಲ್ಡ್ ಅಕಾಡೆಮಿಯ ಆಶ್ರಯದಲ್ಲಿ ಆಯೋಜಿಸಿರುವ ಎಲ್ಲಾ ಚಟುವಟಿಕೆಗಳು ಮಕ್ಕಳಲ್ಲಿ ಹೊಸ ಉತ್ಸಾಹ ಮತ್ತು ಹುರುಪನ್ನು ನೀಡುತ್ತಿವೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ನಾನಾ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ನಗದು ಬಹುಮಾನದ ಜೊತೆಗೆ ಪಾರಿತೋಷ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಝೀ ಮತ್ತು ಸೋನಿ ಟಿವಿಗಳಲ್ಲಿ ಹೆಸರು ಮಾಡಿರುವ ಬಾಲಪ್ರತಿಭೆ ದಿಯಾ ಹೆಗಡೆ, ಕನ್ನಡ ಮತ್ತು ಹಿಂದಿ ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು.