ವಿಜಯಪುರ: ಸಿಂದಗಿ ತಾಲೂಕಿನ ಮೊರಟಗಿ ಬಳಿ ಧಾಳಿ ನಡೆಸಿರುವ ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ತಯಾರಿಕೆ ಘಟಕ ಪತ್ತೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ರೂ. 8.50 ಲಕ್ಷ ಮೌಲ್ಯದ ಅಕ್ರಮ ಮದ್ಯ ಮತ್ತು ಇತರ ಸಾಮಾನುಗಳನ್ನು ವಶಪಡಿಸಿಕೊಂಡಿದ್ದು, ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಬೆಳಗಾವಿ ಅಬಕಾರಿ ಆಪರ ಆಯುಕ್ತರು, ಜಂಟಿ ಆಯುಕ್ತರು, ವಿಜಯಪುರ ಅಬಕಾರಿ ಉಪಾಯುಕ್ತರು, ಉಪವಿಭಾಗದ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಸಿಂದಗಿ ವಲಯ ವ್ಯಾಪ್ತಿಯ ಮೊರಟಗಿ ರಸ್ತೆಯಲ್ಲಿರುವ ಲೋಯೋಲ ಆಂಗ್ಲ ಶಾಲೆ ಹಿಂದುಗಡೆ ಇರುವ ಅಮೋಘಸಿದ್ಧ ಬಸಪ್ಪ ಹೂಗಾರ ಎಂಬುವರ ಜಮೀನಿನಲ್ಲಿರುವ ಶೆಡ್ಡಿನ ಮೇಲೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಈ ಘಟಕ ಪತ್ತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ 561.60 ಲೀ. ನಕಲಿ ಮದ್ಯವನ್ನು ಮತ್ತು 140 ಲೀಟರ್ ಮದ್ಯಸಾರವನ್ನು ಹಾಗೂ ನಕಲಿ ಮಧ್ಯ ತಯಾರಿಸಲು ಬೇಕಾದ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಅಲ್ಲದೇ, ಈ ಸಂದರ್ಭದಲ್ಲಿ ಘಟಕದಲ್ಲಿದ್ದ ಓರ್ವ ಮತ್ತು ಹುಬ್ಬಳ್ಳಿಯಲ್ಲಿ ವಾಸಿಸುವ ಐದು ಜನ ಆರೋಪಿತರನ್ನು ಬಂಧನ ಮಾಡಿದ್ದಾರೆ.
ಸಿಂದಗಿ ಅಬಕಾರಿ ನಿರೀಕ್ಷಕ ಶಿವಾನಂದ ಹಾಗೂರ ಅವರು ಈ ಕುರಿತ ಪ್ರಕರಣ ದಾಖಲಿಸಿದ್ದು, ಈ ಕಾರ್ಯಾಚರಣೆಯಲ್ಲಿ ಅಬಕಾರಿ ಉಪಾಯುಕ್ತ ವೀರಣ್ಣ ಭಾಗೇವಾಡಿ, ಅಬಕಾರಿ ನಿರೀಕ್ಷಕರಾದ ಮಹಾದೇವ ಪೂಜಾರಿ, ರಾಹುಲ ನಾಯಕ, ಎಂ. ಡಿ. ಕಬಾಡೆ, ಉಪ ನಿರೀಕ್ಷಕ ಬಿ. ಎಸ್. ನಾಗಠಾಣ, ಡಿ. ವಿ. ರಜಪೂತ, ಎ. ಎಂ. ಪತ್ತಾರ, ಎನ್. ಎ. ಬಾರಾಗಣಿ, ವಾದಿರಾಜ ಎನ್. ಆಶ್ರಿತ , ಫರೀನಾ ವಣಕ್ಯಾಳ ಹಾಗೂ ಸಿಬ್ಬಂದಿಯಾದ ಎಂ. ಬಿ. ಮೊಕಾಶಿ, ಎಂ. ಎಲ್. ಪೂಜಾರಿ, ಅಪ್ಪು(ಹಣಮಂತ್ರಾಯ) ಬೈರಗೊಂಡ, ಬಿ. ಎಸ್. ಇಂಡಿ, ನಾಗಪ್ಪ ಸಾತಲಗಾಂವ, ಭೀಮಾಶಂಕರ ಸಂಗೊಂಡ, ಎ. ಎಸ್. ಗೊಣಸಗಿ, ಶ್ರೀಶೈಲ ಪೂಜಾರಿ ಮುಂತಾದವರು ಪಾಲ್ಗೊಂಡಿದ್ದರು ಎಂದು ಅಬಕಾರಿ ಇಲಾಖೆ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.