ವಿಜಯಪುರ: ನಗರದ ಎಲ್ಲ ಶಾಲೆಗಳ 15279 ಮಕ್ಕಳಿಗೆ ವಿಮೆ ಮಾಡಿಸುವ ಮೂಲಕ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜ್ಯದಲ್ಲಿಯೇ ಪ್ರಥಮ ಮತ್ತು ವಿನೂತನ ಕಾರ್ಯ ಮಾಡಿದ್ಸಾರೆ.
ಶಾಲಾ ಮಕ್ಕಳನ್ನು ಗುಂಪು ವಿಮೆಗೆ ಒಳಪಡಿಸುವ ಮಹತ್ತರ ಕಾರ್ಯಕ್ರಮಕ್ಕೆ ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಅವರು ವಿಮಾಪತ್ರ ವಿತರಿಸಿದರು.
ಮಕ್ಕಳು ಅಪಘಾತ, ವಿದ್ಯುತ್ ಶಾಕ್, ಹಾವು, ಚೇಳು ಕಡಿತ ಮತ್ತಿತರೆ ಕಾರಣಗಳಿಂದ ಮೃತಪಟ್ಟರೆ, ಅವರನ್ನೇ ನಂಬಿದ್ದ ಆ ಕುಟುಂಬಸ್ಥರ ಬಾಳಿಗೆ ಕತ್ತಲಾಗಲಿದೆ. ಈ ವಿಮೆ ಸೌಲಭ್ಯದಿಂದ ಅಂಥ ಪಾಲಕರಿಗೆ ಆರ್ಥಿಕವಾಗಿ ನೆರವಾಗಲು ರೂ.2 ಲಕ್ಷ ಪರಿಹಾರ, ಗಂಭೀರವಾಗಿ ಗಾಯಗೊಂಡ ಮಕ್ಕಳ ಚಿಕಿತ್ಸೆಗೆ ರೂ.1 ಲಕ್ಷ ಪರಿಹಾರ ಒದಗಿಸಲು ಅನುಕೂಲವಾಗಲಿದೆ. ಈ ಸದುದ್ದೇಶದಿಂದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಲ್ಷತೆಯ ಸಿದ್ಧಸಿರಿ ಸೌಹಾರ್ದ ಸಹಕಾರಿ ಸಂಘ ನಿಯಮಿತದಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಮಾ ಖಾತೆಗೆ ಹಣ ಭರಿಸಿ ಮಾಡಿ, ವಿಜಯಪುರ ನಗರ ಮತಕ್ಷೇತ್ರದದಲ್ಲಿ ಬರುವ 128 ಪ್ರಾಥಮಿಕ ಶಾಲೆಗಳು ಮತ್ರು 7 ಪ್ರೌಢ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ 15,279 ಮಕ್ಕಳನ್ನು ಗುಂಪು ವಿಮೆಗೆ ಸೇರಿಸಲಾಗಿದೆ. ಈ ವಿಮೆಯ ಪ್ರಮಾಣ ಪತ್ರವನ್ನು ಯತ್ನ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿದರು.
ಇದೇ ವೇಳೆ, ನವದೆಹಲಿಯ ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್ ಸಹ ವಿತರಿಸಲಾಯಿತು.
ನಂತರ ಮಾತನಾಡಿದ ಯತ್ನಾಳ, ಸುರಕ್ಷತೆ ಎನ್ನುವುದು ಎಲ್ಲದಕ್ಕೂ ಇದೆ. ಶಾಲಾ ಮಕ್ಕಳಿಗೆ ವಿಮೆ ಮಾಡಬೇಕೆಂದು ಯೋಚಿಸಿ, ನಗರ ಮಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸರಕಾರಿ ಶಾಲೆಗಳಿಗೆ ಮಾತ್ರ ವಿಮೆಗೆ ಒಳಪಡಿಸಲಾಗಿತ್ತು. ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರ ಮನವಿ ಮೇರೆಗೆ ನಗರದಲ್ಲಿ ಬರುವ(ನಾಗಠಾಣ ಮತಕ್ಷೇತ್ರದ ನಗರ ವ್ಯಾಪ್ತಿಯ ಶಾಲೆಗಳೂ ಸೇರಿದಂತೆ) ಎಲ್ಲ ಅನುದಾನಿತ, ಅನುದಾನ ರಹಿತ ಶಾಲೆಗಳ ಮಕ್ಕಳಿಗೂ ಸಹ ಈ ಗುಂಪು ಯೋಜನೆಯಡಿ ಒಳಪಡಿಸುವುದಾಗಿ ಘೋಷಿಸಿದರು.
ವಿಮೆ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ಮತ್ತು ಅವರ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಲು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ವಿಜಯಪುರ ಜಿಲ್ಲೆಗೆ ಹಾಗೂ ಎಲ್ಲ ತಾಲೂಕುಗಳಿಗೆ ಪ್ರಥಮ ಸ್ಥಾನ ಪಡೆಯುವ ಮಕ್ಕಳಿಗೆ ಲ್ಯಾಪಟಾಪ್ ಬಹುಮಾನವಾಗಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಈಗಾಗಲೇ ನಗರದ ಸರಕಾರಿ ಶಾಲೆಗಳಿಗೆ ಸಾಕಷ್ಟು ಕೊಠಡಿಗಳನ್ನು ನಿರ್ಮಿಸಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಸಕಲ ಮೂಲಸೌಕರ್ಯ ಒದಗಿಸಲಾಗಿದ್ದು, ದೇಶದ ಭವಿಷ್ಯ ರೂಪಿಸುವ ಶಾಲೆಗಳ ಅಭಿವೃದ್ಧಿಗೂ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ನಾಗಠಾಣ ಶಾಸಕ ವಿಠ್ಠಲ ಧೋ. ಕಟಕದೊಂಡ ಮಾತನಾಡಿ, ಈ ದಿನ ಅತ್ಯಂತ ಶುಭದಿನವಾಗಿದೆ. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇಂದಿನ ಮಕ್ಕಳೇ ನಾಳೆಯ ನಾಗರಿಕರು ಎಂಬ ಕಲ್ಪನೆಯಿಂದ ತಮ್ಮ ಅಧ್ಯಕ್ಷತೆಯ ಸಿದ್ದಸಿರಿ ಸೌಹಾರ್ದ ಸಹಕಾರಿಯಿಂದ ಜಾತಿ, ಧರ್ಮ ಎನ್ನದೆ, ನನ್ನ ನಾಗಠಾಣ ಮತಕ್ಷೇತ್ರದ 33 ಶಾಲೆಗಳು ಸೇರಿ ನೂರಾರು ಶಾಲೆಗಳ ಮಕ್ಕಳಿಗೆ ಗುಂಪು ವಿಮೆ ಮಾಡಿಸುವ ಮೂಲಕ ದೇಶದಲ್ಲೇ ಮಾದರಿ ಕಾರ್ಯ ಮಾಡಿದ್ದಾರೆ. ಈ ಮೂಲಕ ಅವರು ಮತ್ತೊಬ್ಬರಿಗೆ ಮಾರ್ಗದರ್ಶಿಯಾಗುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ ಮಾತನಾಡಿ, ಮಕ್ಕಳ ಜೀವನದಲ್ಲಿ ನೀರಿನಲ್ಲಿ ಮುಳುಗಿ, ಹಾವು, ಚೇಳು ಕಡಿತ, ವಿದ್ಯುತ್ ಶಾಕ್ ಮತ್ತಿತರೆ ಕಾರಣದಿಂದ ಆಗಬಹುದಾದ ಅಪಾಯಕ್ಕೆ ಗುಂಪು ವಿಮೆ ಜಾರಿ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸೋಮನಿಂಗ ಗೆಣ್ಣೂರ ಮಾತನಾಡಿ, ಮಗು ಮನುಷ್ಯನ ತಂದೆ. ಇದು ಮಕ್ಕಳ ಪ್ರಪಂಚ. ಮಕ್ಕಳಿಗಾಗಿಯೇ ಶಿಕ್ಷಕರು, ಪಾಲಕರು. ಅವರ ಯೋಜನೆಗಳನ್ನು ರೂಪಿಸುವುದು ನಮ್ಮ ಕರ್ತವ್ಯ. ಶಾಸಕ ಯತ್ನಾಳ ಅವರು ಮಕ್ಕಳಿಗಾಗಿ ಮಾಡುತ್ತಿರುವ ವಿಮೆ ಯೋಜನೆ ದೇಶದಲ್ಲಿಯೇ ಪ್ರಥಮ ಕಾರ್ಯಕ್ರಮ ಎನ್ನುವುದಕ್ಕೆ ಖುಷಿ ಆಗುತ್ತಿದೆ ಎಂದು ಹೇಳಿದರು.
ವಿಜಯಪುರ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ ಮಾತನಾಡಿ, ಸರಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಅತ್ಯಂತ ಸಮಾಜಮುಖಿಯಾಗಿ ಗುಂಪು ವಿಮೆ ಅದ್ಯಾರ್ಪಿಸಿ, ಪತ್ರ ನೀಡುವ ಮೂಲಕ ಮಕ್ಕಳ ಬದುಕಿನಲ್ಲಿ ಹೊಸ ಭಾಷ್ಯ ಬರೆಯುವ ಸುಂದರ ಕ್ಷಣಕ್ಕೆ ಶಾಸಕ ಯತ್ನಾಳ ಅವರು ಮಾಡಿರುವ ಕೆಲಸ ಐತಿಹಾಸಿಕವಷ್ಟೇ ಅಲ್ಲ, ಅರ್ಥಪೂರ್ಣವಾದದ್ದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ವಿಜಯಕುಮಾರ ಟಂಕಸಾಲಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಂಕರ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ಎಂ. ಎಸ್. ಕರಡಿ, ಪ್ರೇಮಾನಂದ ಬಿರಾದಾರ, ಮಳುಗೌಡ ಪಾಟೀಲ, ಶಿವರುದ್ರ ಬಾಗಲಕೋಟ, ರಾಹುಲ ಜಾಧವ, ವಿಠ್ಠಲ ಹೊಸಪೇಟೆ, ರಾಜಶೇಖರ ಕುರಿಯವರ, ಜವಾಹರ ಗೋಸಾವಿ, ಮಲ್ಲಿಕಾರ್ಜುನ ಗಡಗಿ, ಗಿರೀಶ ಪಾಟೀಲ, ಸ್ವಪ್ನಾ ಕಣಮುಚನಾಳ, ಮುಖಂಡರಾದ ರಾಜೇಶ ದೇವಗಿರಿ, ಮಹೇಶ ಒಡೆಯರ, ಸಚೀನ ಕುಮಸೆ ಎಸ್. ಬಿ. ಐ ಮುಖ್ಯ ವ್ಯವಸ್ಥಾಪಕ ರವೀಂದ್ರ ರತ್ನಾಕರ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ, ಸರಕಾರಿ ಶಿಕ್ಷಕರ ಸಂಘದ ಅಧ್ಯಕ್ಷ ಶಿವಲಿಂಗಪ್ಪ ಪಟ್ಟಣಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರ ಸೇರಿದಂತೆ ಶಿಕ್ಷಣ ತಜ್ಞರು, ಶಿಕ್ಷಕರು, ಪಾಲಕರು, ಸಾವಿರಾರು ಮಕ್ಕಳು ಉಪಸ್ಥಿತರಿದ್ದರು.