ವಿಜಯಪುರ: ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೈಗಾರಿಕೆ ಸಚಿವರ ತವರು ಕ್ಷೇತ್ರ ಬಬಲೇಶ್ವರ ಹಾಗೂ ತಿಕೋಟಾ ತಾಲೂಕುಗಳ ಕಾಲೇಜು ವಿದ್ಯಾರ್ಥಿಗಳಿಗೆ ಈ ಸಮಾವೇಶದಲ್ಲಿ ಒಂದು ದಿನದ ಮಟ್ಟಿಗೆ ಭಾಗವಹಿಸಲು ಅವಕಾಶ ಒದಗಿಸುವ ಮೂಲಕ ಗ್ರಾಮೀಣ ಪ್ರದೇಶದ ಯುವ ಪದವಿ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ನಾನಾ ಉದ್ದಿಮೆಗಳು ಹಾಗೂ ಉದ್ಯಮಿಪತಿಗಳ ಸಂದರ್ಶನಕ್ಕೆ ಸಚಿವ ಎಂ. ಬಿ. ಪಾಟೀಲ ಸ್ವತಃ ಅವಕಾಶ ಕಲ್ಪಿಸಿದ್ದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಿಮ್-2025 ಇನ್ವೆಸ್ಟ್ ಕರ್ನಾಟಕ ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಹಿಂದೆಗಿಂತಲೂ ಈ ಬಾರಿ ಹೆಚ್ಚು ಪ್ರಮಾಣದಲ್ಲಿ ವಿಶ್ವದ ಹಲವು ರಾಷ್ಟ್ರಗಳಿಂದ ಹಾಗೂ ದೇಶದಾದ್ಯಂತ ಉದ್ದಿಮೆದಾರರು ಪಾಲ್ಗೊಂಡಿರುವುದು ಸಮಾವೇಶದ ಸಂಭ್ರಮ ಹೆಚ್ಚಿಸಿದೆ. ಸಮಾವೇಶದ 2ನೇ ದಿನ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ ಅವರು ತಮ್ಮ ಸ್ವಕ್ಷೇತ್ರ ಬಬಲೇಶ್ವರ ಮತ್ತು ತಿಕೋಟಾ ತಾಲೂಕುಗಳ ನಾನಾ ಗ್ರಾಮಗಳ ಲಾ, ನರ್ಸಿಂಗ್, ಬಿ.ಎ, ಬಿ.ಎಸ್.ಸಿ, ಬಿ.ಕಾಂ ಇತ್ಯಾದಿ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯ್ದ 200 ವಿದ್ಯಾರ್ಥಿಗಳು ಹಾಗೂ 15 ಜನ ಪ್ರಾಧ್ಯಾಪಕರಿಗೆ ನಾಲ್ಕು ಕೆ.ಎಸ್.ಆರ್.ಟಿ.ಸಿ ಬಸ್ಸುಗಳ ವ್ಯವಸ್ಥೆ ಮಾಡಿ, ವಿಜಯಪುರದಿಂದ ಬೆಂಗಳೂರಿಗೆ ಕರೆತಂದರು. ಅಲ್ಲದೇ, ಬೆಳಿಗ್ಗೆಯಿಂದ ರಾತ್ರಿಯವರೆಗೆ ಇಡೀ ದಿನ ಸಮಾವೇಶದ ನಾನಾ ಗೋಷ್ಠಿಗಳಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸಂಜೆ ನಡೆದ ಇನ್ವೆಸ್ಟ್ ಕರ್ನಾಟಕ ಬಹುಮಾನ ವಿತರಣೆ ಸಮಾರಂಭದಲ್ಲಿಯೂ ಪಾಲ್ಗೊಂಡಿದ್ದರು.

ಈ ಸಮಾವೇಶದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಕೋಳಕರ, ಗಣೇಶ ಗೋಡಸೆ, ನವೀನ ಚಿಟ್ಟಿ, ದಿವ್ಯಾ ಬೂದಿಹಾಳಮಠ, ರೇಣುಕಾ, ತಸ್ಲಿಮ್ ಜಮಾದಾರ, ಮೇಘಾ ಬಿರಾದಾರ ಮಾತನಾಡಿದ ಅವರು, ಹಳ್ಳಿಯಲ್ಲಿ ಹುಟ್ಟಿ ಬೆಳೆದ ನಾವು ವಿಜಯಪುರವನ್ನು ಮಾತ್ರ ನೋಡಿದ್ದೇವು. ಬೆಂಗಳೂರಿಗೆ ಬಂದು ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಪಾಲ್ಗೊಂಡಿರುವುದು ನಮಗೆ ಹೆಚ್ಚಿನ ಆತ್ಮಬಲ ನೀಡಿದೆ. ಹೊಸ ಹೊಸ ಅವಕಾಶಗಳಿಗೆ, ಆವಿಷ್ಕಾರಗಳಿಗೆ ಇಲ್ಲಿ ಸಾಕಷ್ಟು ದಾರಿಗಳು ಇವೆ. ಇಂತಹ ಅದ್ಭುತ ಸಮಾವೇಶದಲ್ಲಿ ಪಾಲ್ಗೊಂಡು ಅತೀ ಖುಷಿ ಪಟ್ಟಿದ್ದೇವೆ. ಎಂ.ಬಿ.ಪಾಟೀಲರು ನಮ್ಮವರು ಎಂಬ ಹೆಮ್ಮೆಯಿದೆ. ನೀರಾವರಿ ಮಂತ್ರಿಗಳಾಗಿದ್ದಾಗಲೂ ನಮ್ಮ ಭಾಗಕ್ಕೆ ಅದ್ಭುತವಾದ ಕೆಲಸ ಮಾಡಿ, ನಮಗೆ ಅನ್ನದಾತರಾಗಿದ್ದಾರೆ. ಇದೀಗ ಇಡೀ ರಾಜ್ಯಕ್ಕೆ ವಿಶ್ವದ ಬಂಡವಾಳ ಹೂಡಿಕೆಯನ್ನು ಮಾಡಿ, ರಾಜ್ಯದ ಉದ್ಯೋಗದಾತರಾಗಲಿದ್ದಾರೆ ಎಂದು ಹೇಳಿದರು.
ಸಂಜೆ ಸಮಾವೇಶದಲ್ಲಿ ಬಿ. ಎಲ್. ಡಿ. ಇ ಸಂಸ್ಥೆಯ ನಿರ್ದೇಶಕ ಮತ್ತು ಯುವ ಉದ್ದಿಮೆದಾರ ಬಸನಗೌಡ ಎಂ.ಪಾಟೀಲ ಇನ್ವೆಸ್ಟ್ ಕರ್ನಾಟಕ ಯೋಜನೆ ಮತ್ತು ವಿಜಯಪುರದಲ್ಲಿ ಮುಂದಿನ ದಿನಗಳಲ್ಲಿ ಆರಂಭವಾಗಲಿರುವ ಉದ್ದಿಮೆಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕೈಗಾರಿಕೆ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಬಿ.ಎಲ್.ಡಿ.ಇ ಸಂಸ್ಥೆ ಕಾನೂನು ಸಹಾಯಕ ಸಲಹೆಗಾರ ಸೂರ್ಯಕಾಂತ ಬಿರಾದಾರ, ಪ್ರಾಧ್ಯಾಪಕರಾದ ಅಮಿತ ಬಿರಾದಾರ, ಭಾಗ್ಯಶ್ರೀ ಬಾಗೇವಾಡಿ, ಕೀರ್ತಿ ಹಳೆಮನಿ, ನವನಾಥ ಅಜೂರ ಮುಂತಾದವರು ಪಾಲ್ಗೊಂಡಿದ್ದರು.