ವಿಜಯಪುರ: ನಗರದ ಖ್ಯಾತ ಪ್ರೇರಣಾ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಹೆಸರಾಂತ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್ ನಗರದಲ್ಲಿ ನೀಟ್ ಮತ್ತು ಜೆಇಇ ತರಬೇತಿ ಕೇಂದ್ರ ಸ್ಥಾಪಿಸಲು ಒಡಂಬಡಿಕೆ ಮಾಡಿಕೊಂಡಿವೆ.
ನಗರದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಕಾಶ ಶಿಕ್ಷಣ ಸಂಸ್ಥೆಯ ದಕ್ಷಿಣ ಭಾರತ ಸೇಲ್ಸ್ ವಿಭಾಗದ ಜನರಲ್ ಮ್ಯಾನೇಜರ್ ಪ್ರೇಮಚಂದ ರಾಯ್ ಈ ಮಾಹಿತಿ ನೀಡಿದ್ದಾರೆ.
ಪ್ರೇರಣಾ ಸೆಂಟರ್ ಆಫ್ ಎಜುಕೇಶನಲ್ ಎಕ್ಸಲೆನ್ಸ್ ಜೊತೆ ಭಾರತದ ಪ್ರಮುಖ NEET ಮತ್ತು JEE ಪ್ರವೇಶ ಪರೀಕ್ಷಾ ತರಬೇತಿ ಸಂಸ್ಥೆ ಆಕಾಶ್ ಎಜುಕೇಶನಲ್ ಸರ್ವಿಸಸ್ ಲಿಮಿಟೆಡ್(AESL) ಹೊಸ ತರಬಪೇತಿ ಕೇಂದ್ರವನ್ನು ಪ್ರಾರಂಭಿಸಿದೆ. 2025-26ನೇ ಶೈಕ್ಷಣಿಕ ವರ್ಷದಿಂದ ಈ ಕೇಂದ್ರ ಕಾರ್ಯಾರಂಭ ಮಾಡಲಿದೆ. ಇದರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದಂತೆ ಈ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ಸಿಗಲಿದೆ. ಆಕಾಶ್ ಸಂಸ್ಥೆಯ ಅನುಭವಿ ಬೋಧಕರು ಗುಣಮಟ್ಟದ ತರಬೇತಿ ನೀಡಲಿದ್ದಾರೆ. ದೇಶಾದ್ಯಂತ ಸಂಸ್ಥೆಗೆ ಸೇರಿದ 315ಕ್ಕಿಂತಲೂ ಹೆಚ್ಚು ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿ ಬೆಂಗಳೂರು, ಹುಬ್ಬಳ್ಳಿ- ಧಾರವಾಡ ಮೈಸೂರಿನಲ್ಲಿ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರೇರಣಾ ಸೆಂಟರ್ ಆಫ್ ಎಜುಕೇಶನಲ್ ಎಕ್ಸಲೆನ್ಸ್ ಅಧ್ಯಕ್ಷ ಡಾ. ಅರವಿಂದ ಪಾಟೀಲ ಮಾತನಾಡಿದ, ಆಕಾಶ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದು ಸಂತಸ ತಂದಿದೆ. ಬಸವನಾಡಿನ ವಿದ್ಯಾರ್ಥಿಗಳಿಗೆ ಕೈಗೆಟಕುವಂತೆ ಗುಣಮಟ್ಟದ ಶಿಕ್ಷಣ ನೀಡಲು ಕೈಗೊಂಡ ಪ್ರಮುಖ ನಿರ್ಧಾರ ಇದಾಗಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕಲಿಕೆಯ ಸ್ಪಷ್ಟತೆ ಮತ್ತು ಆತ್ಮವಿಶ್ವಾಸ ತುಂಬುವುದು ಮತ್ತು NEET ಮತ್ತು JEE ನಲ್ಲಿ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಮೊದಲ ಒಂಬತ್ತು ಸ್ಥಾನಗಳಲ್ಲಿ ಒಬ್ಬರಾಗಿ ಸಾಧನೆ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ ಎಂದು ತಿಳಿಸಿದರು.
ಪ್ರೇರಣಾ ಪಿಯು ಕಾಲೇಜಿನಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಪಾಠ ಮಾಡಲಾಗುತ್ತದೆ. ಪ್ರತಿ ದಿನ ಸಂಜೆ 5 ರಿಂದ ರಾತ್ರಿ 8 ಗಂಟೆಯವರೆಗೆ ಆನಲೈನ್ ಮೂಲಕ ನೀಟ್ ಮತ್ತು ಜೆಇಇ ತರಬೇತಿ ನೀಡಲಾಗುವುದು. ಅಷ್ಟೇ ಅಲ್ಲ, ಬೇರೆ ಯಾವುದೇ ಪಿಯು ಕಾಲೇಜಿನ ವಿದ್ಯಾರ್ಥಿಗಳೂ ಕೂಡ ನಿಗದಿ ಪಡಿಸಿದ ಶುಲ್ಕ ಪಾವತಿಸಿ ಈ ತರಬೇತಿಗೆ ಸೇರಬಹುದಾಗಿದೆ. ಈ ಕೇಂದ್ರದಲ್ಲಿ ಆದುನಿಕ ಅಧ್ಯಯನ ಸಾಮಗ್ರಿಗಳು, ಡಿಜಿಟಲ್ ಹೈ ಕ್ವಾಲಿಟಿ ಸ್ಟಡಿ ಮಟಿರೀಯಲ್ ಮತ್ತು ತಂತ್ರಜ್ಞಾನ ಆಧರಿತ ಕಲಿಕೆಗೆ ಒತ್ತು ನೀಡಲಾಗುತ್ತಿದೆ. ವಿದ್ಯಾರ್ಥಿಗಳ ಕಲಿಕೆಯ ನಿಗಾ ವಹಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರೇರಣಾ ಸಂಸ್ಥೆಯ ನಿರ್ದೇಶಕ ಸುಕೃತ ಪಾಟೀಲ ಉಪಸ್ಥಿತರಿದ್ದರು.